ಸಾರಾಂಶ
ಮಂಡ್ಯ ಕಲ್ಲು ಹೋರಾಟ ಪ್ರಕರಣದಲ್ಲಿ ಕೇರಳದ ಆರೋಪಿಗಳು ಇದ್ದರು. ಇಂತಹ ದಾಳಿ ನಡೆದಾಗ ಪಿಎಫ್ಐ ಪಾತ್ರ ಮತ್ತೆ ಮತ್ತೆ ಸಾಬೀತಾಗಿದೆ. ಕೇರಳದ ನಂಟು ಕೂಡ ತುಂಬಾ ಸಲ ಕೇಳಿ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಸುನಿಲ್ ಕುಮಾರ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಾಗಲೆಲ್ಲಾ ಕೇರಳದ ನಂಟು ಸದ್ದು ಮಾಡುತ್ತಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತಿಲ್ಲ, ಆದ್ದರಿಂದ ಮಂಗಳೂರು ಘಟನೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಕೊಡಬೇಕು ಎಂದು ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದರು.ಅವರು ಸೋಮವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಈ ಹಿಂದೆ ಮಂಡ್ಯ ಕಲ್ಲು ಹೋರಾಟ ಪ್ರಕರಣದಲ್ಲಿ ಕೇರಳದ ಆರೋಪಿಗಳು ಇದ್ದರು. ಇಂತಹ ದಾಳಿ ನಡೆದಾಗ ಪಿಎಫ್ಐ ಪಾತ್ರ ಮತ್ತೆ ಮತ್ತೆ ಸಾಬೀತಾಗಿದೆ. ಕೇರಳದ ನಂಟು ಕೂಡ ತುಂಬಾ ಸಲ ಕೇಳಿ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಅಂತಾರಾಷ್ಟ್ರೀಯ ಷಡ್ಯಂತ್ರ ಎಂಬುದನ್ನು ಒಪ್ಪಿಕೊಳ್ಳಲು ಸರ್ಕಾರ ತಯಾರಿಲ್ಲ ಎಂದರು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದಾಗಲೂ ಒಪ್ಪಿಕೊಂಡಿಲ್ಲ, ಓಲೈಕೆ ರಾಜಕಾರಣದಿಂದ ಹೊರಬಂದು ಆಂತರಿಕ ಭದ್ರತೆಯ ಸವಾಲು ಎಂದು ಪರಿಗಣಿಸಿ, ಸೂಕ್ತ ತನಿಖೆ ನಡೆಸಿ. ಹಿಂದೂಗಳ ಮೆರವಣಿಗೆಗಳು ನಡೆದಾಗ ಈ ರೀತಿಯ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.ಬಿ.ಸಿ. ರೋಡಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುನೀಲ್ ಕುಮಾರ್, ಮುಸಲ್ಮಾನ ಮುಖಂಡರು ತಮ್ಮ ಯುವಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಬುದ್ಧಿವಾದ ಹೇಳಬೇಕು. ಶಾಂತಿ, ಸೌಹಾರ್ದ ವಾತಾವರಣವನ್ನು ಹಿಂದೂಗಳು ಎಂದಿಗೂ ಕೆಡಿಸುವುದಿಲ್ಲ. ಸವಾಲುಗಳಿಗೆ ಉತ್ತರ ಕೊಡುವ ತಾಕತ್ತು ನಮಗೂ ಹಾಗೂ ನಮ್ಮ ಕಾರ್ಯಕರ್ತರಿಗೆ ಇದೆ ಎಂದರು.