ಸಾರಾಂಶ
ಸುಭಾಶ್ಚಂದ್ರ ವಾಗ್ಳೆ
ಕನ್ನಡಪ್ರಭ ವಾರ್ತೆ ಉಡುಪಿಕಳೆದ ವರ್ಷ ತೈವಾನ್‌ನಿಂದ ಬೀಜ ತರಿಸಿ ಕೆಂಪು-ಹಳದಿ ಕಲ್ಲಂಗಡಿ ಬೆಳೆಸಿ ಬಂಪರ್ ಯಶಸ್ಸು ಗಳಿಸಿದ್ದ ಹಿರಿಯಡ್ಕದ ಕೃಷಿಕ ಸುರೇಶ್ ನಾಯಕ್ ಬೊಮ್ಮರಬೆಟ್ಟು, ಈ ಬಾರಿ ಕೇರಳದಿಂದ ದೊಡ್ಡ ಗಾತ್ರದ ಇಬ್ಬುಡ್ಲ ಅಥವಾ ಇಬ್ಬಟ್ಟಲು ಹಣ್ಣು ಬೆಳೆಸಿ ಕರಾವಳಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.ಈ ಬೇಸಿಗೆ ಕಾಲದಲ್ಲಿ ಸ್ವಾದಿಷ್ಟವೂ, ಪೌಷ್ಟಿಕವೂ ಆಗಿರುವ ರಸಾಯನ ತಯಾರಿಸಲು ಇಬ್ಬುಡ್ಲ (ಸ್ನಾಪ್ ಮೆಲನ್)ಗೆ ಭಾರಿ ಬೇಡಿಕೆ ಇದೆ. ಆದರೆ ಕರ್ನಾಟಕದಲ್ಲಿ ಇದರ ಇಳುವರಿ ಮತ್ತು ಗಾತ್ರ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆ ಇದೆ, ಸಹಜವಾಗಿಯೇ ಬೆಲೆಯೂ ಹೆಚ್ಚಿದೆ.ಇದನ್ನರಿತ ಸದಾ ಕೃಷಿಯಲ್ಲಿ ಒಂದಲ್ಲ ಒಂದು ಪ್ರಯೋಗ ಮಾಡುವ ಸುರೇಶ್ ನಾಯಕ್ ಅವರಿಗೆ ಈ ಬಾರಿ ಕೇರಳದಿಂದ ಪೊಟ್ಟು ವೆಳ್ಳರಿ ಎಂದು ಕರೆಯುವ ಇಬ್ಬುಡ್ಲ ತಳಿಯ ಬೀಜವನ್ನು ಜಲತಜ್ಞ ಶ್ರೀಪಡ್ರೆಯವರು ಕೇರಳದ ತ್ರಿಶ್ಶೂರಿನಿಂದ ತರಿಸಿಕೊಟ್ಟಿದ್ದು, ಪ್ರಾಯೋಗಿಕವಾಗಿ 1 ಎಕ್ರೆ ಪ್ರದೇಶದಲ್ಲಿ ಬಿತ್ತಿದ್ದರು. ಅವರ ನಿರೀಕ್ಷೆಗೂ ಮೀರಿ 6-7 ಟನ್ ಇಳುವರಿ ಸಿಕ್ಕಿದೆ.* ಹೆಚ್ಚಿನ ಬೇಡಿಕೆಸ್ಥಳೀಯ ಇಬ್ಬುಡ್ಲ ಕೆಲವೇ ಇಂಚು ದೊಡ್ಡದಾಗಿ ಬೆಳೆದರೆ, ಪೊಟ್ಟು ವೆಳ್ಳರಿ ಮಾತ್ರ 1ರಿಂದ 1.50 ಅಡಿಯಷ್ಟು ಉದ್ದ, 2ರಿಂದ 4 ಕೆಜಿ ವರೆಗೂ ಬೆಳೆಯುತ್ತದೆ. ಹೆಚ್ಚು ಸ್ವಾದಿಷ್ಟವೂ ಆಗಿದೆ. ಅದನ್ನು ಕೊಯ್ದು ಮಾರುಕಟ್ಟೆಗೆ ತರುತಿದ್ದಂತೆ ವಿಪರೀತ ಬೇಡಿಕೆ ಬಂದು ಬಿಟ್ಟಿದೆ. ಆದರೆ ಬಲಿತ ಹಣ್ಣು ಬೆಳಗ್ಗೆ ಕೊಯ್ದರೇ ಸಂಜೆಯೊಳಗೆ ಒಡೆದು, ಮರುದಿನಕ್ಕೆ ಹಾಳಾಗುತ್ತಿದೆ. ಇದರಿಂದ ಈ ಬಾರಿ ಒಂದೆರಡು ಟನ್ ಹಣ್ಣುಗಳು ವ್ಯರ್ಥವಾದವು ಇದೊಂದೇ ಸಮಸ್ಯೆ ಎನ್ನುತ್ತಾರೆ ಸುರೇಶ್ ನಾಯಕ್.ಪ್ರಥಮ ಬೆಳೆಯಲ್ಲಿಯೇ ಈ ಯಶಸ್ಸಿನಿಂದ ಖುಷಿಗೊಂಡಿರುವ ಸುರೇಶ್ ನಾಯಕ್ ಮತ್ತೆ 3 ಎಕ್ರೆ ಪ್ರದೇಶದಲ್ಲಿ ಬೀಜ ಬಿತ್ತಿದ್ದಾರೆ. ಇನ್ನೊಂದೆರಡು ತಿಂಗಳಲ್ಲಿ ಉಡುಪಿಯ ಮಾರುಕಟ್ಟೆಗೆ ಭರ್ಜರಿಯಾಗಿ ಪೊಟ್ಟು ವೆಳ್ಳರಿ ಲಭ್ಯವಾಗಲಿದೆ.ಕಳೆದ ಬಾರಿ ತೈವಾನ್‌ನಿಂದ ಹೊರಗೆ ಹಳದಿ ಸಿಪ್ಪೆ, ಒಳಗೆ ಕೆಂಪು ತಿರುಳು ಮತ್ತು ಹೊರಗೆ ಕಪ್ಪು ಸಿಪ್ಪೆ, ಒಳಗೆ ಹಳದಿ ತಿರುಳಿನ ಕಲ್ಲಂಗಡಿ ತಳಿಯನ್ನು ಬೆಳೆಸಿದ್ದರು. ಈ ಬಾರಿ ಮತ್ತೆ 13 ಎಕ್ರೆಯಲ್ಲಿ ಬೆಳೆದಿದ್ದಾರೆ, ಉತ್ತಮ ಬೆಳೆ ಬಂದಿದೆ. ಬೆಲೆಯೂ ಉತ್ತಮವಾಗಿದೆ. ಜೊತೆಗೆ ಸ್ಥಳೀಯ ಕಲ್ಲಂಗಡಿಯನ್ನೂ 3 ಎಕ್ರೆಯಲ್ಲಿ ಬೆಳೆದಿದ್ದು, ಫಸಲು ಕೈಗೆ ಬಂದಿದೆ.
* ಸಾವಯವ ಕೃಷಿಯಥೇಚ್ಚ ನದಿ ನೀರು ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆಸುವ ಸುರೇಶ್ ನಾಯಕ್, ಈ ಹಣ್ಣುಗಳ ಗಾತ್ರ ಮತ್ತು ಗುಣಮಟ್ಟಕ್ಕೆ ಗ್ರಾಹಕರು ಫಿದಾ ಆಗಿದ್ದಾರೆ. ಕಳೆದ ಭಾನುವಾರವಂತೂ ಹಿರಿಯಡ್ಕ ರಾ.ಹೆ.ಯಲ್ಲಿರುವ ಅವರ ತರಕಾರಿ ಶೆಡ್ ಮುಂದೆ ಸಂತೆಯೇ ನೆರೆದಂತಿತ್ತು. ಸಾಲುಸಾಲು ವಾಹನಗಳಲ್ಲಿ ಬಂದು ಗ್ರಾಹಕರು ಪೊಟ್ಟು ವೆಳ್ಳರಿ, ಕಲ್ಲಂಗಡಿ ಖರೀದಿಸಿದ್ದಾರೆ.ಇತ್ತೀಚೆಗೆ ಉಡುಪಿ ಕೃಷ್ಣಮಠಕ್ಕೆ ಬಂದಿದ್ದ ಮಹಾರಾಷ್ಟ್ರದ ಯಾತ್ರಾರ್ಥಿಗಳು, ಮಾಧ್ಯಮಗಳಲ್ಲಿ ಓದಿದ್ದ ಸುರೇಶ್ ನಾಯಕ್ ಬೆಳಸಿದ್ದ ತೈವಾನ್ ಕಲ್ಲಂಗಡಿ ಕೊಳ್ಳಲು ಹುಡುಕಿಕೊಂಡು ಬಂದಿದ್ದರು.ಈ ಬಾರಿ ಪ್ರಾಯೋಗಿಕವಾಗಿ 30 ಸೆಂಟ್ಸ್‌ನಲ್ಲಿ ಉದ್ದ ಮುಳ್ಳು ಸೌತೆ ಬೆಳೆಸಿದ್ದರು. ಅದರಲ್ಲೂ ಸಿಕ್ಕಾಪಟ್ಟೆ ಬೆಳೆ ಬಂತು ಮಾರ್ರೆ ಎನ್ನುವ ನಾಯಕ್, ಮುಂದಿನ ವರ್ಷ ಇನ್ನೂ ಹೆಚ್ಚು ಬೆಳೆಸ್ತೇನೆ ಎಂದರು. ಇದಲ್ಲದೇ ಅವರು ಬೆಳೆದ ಅಲಸಂಡೆ, ಮೂಲಂಗಿ, ಕೆಂಪುಹರಿವೆ ಇತ್ಯಾದಿ ಕೂಡ ಕಟಾವಾಗಿ ಮಾರುಕಟ್ಟೆಗೆ ಹೋಗುತ್ತಿವೆ.ಕೃಷಿಯಲ್ಲಿ ಲಾಭ ಇಲ್ಲ ಎನ್ನುವವರು ಸುರೇಶ್ ನಾಯಕ್ ಅವರನ್ನು ಭೇಟಿಯಾದರೆ ಕೃಷಿಯನ್ನು ಖುಷಿಯಿಂದ ಮಾಡಿದರೆ ನಷ್ಟವೇ ಇಲ್ಲ ಎನ್ನುವುದನ್ನು ತೋರಿಸಿಕೊಡುತ್ತಿದ್ದಾರೆ.ಬೆಂಗಳೂರಿಂದಲೂ ಬೇಡಿಕೆ ಬಂದಿದೆಕೆಂಪು ಹಳದಿ ಕಲ್ಲಂಗಡಿಯನ್ನು ಉಡುಪಿ ಮಾತ್ರವಲ್ಲ ಮಂಗಳೂರು, ಶಿರಸಿಯಿಂದಲೂ ವ್ಯಾಪಾರಿಗಳು ಬಂದು ರಖಂ ಬೆಲೆಗೆ ಖರೀದಿಸುತಿದ್ದಾರೆ. ಬೆಂಗಳೂರು, ಮೈಸೂರು ಮತ್ತು ರಾಜ್ಯದ ಇತರ ಕಡೆಗಳಿಂದಲೂ ಬೇಡಿಕೆ ಬಂದಿದೆ, ಆದರೆ ಸಾಗಾಟದಲ್ಲಿ ಹಾಳಾಗುತ್ತವೆ, ಪಾರ್ಸೆಲ್ ಕಳಿಸುವುದು ಕಷ್ಟವಾದ್ದರಿಂದ ಕಳುಹಿಸುತ್ತಿಲ್ಲ ಎನ್ನುತ್ತಾರೆ ಸುರೇಶ್ ನಾಯಕ್.