ಸಿದ್ದಾಪುರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಲಾಗಿರುವ ಆಶ್ರಮದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ 13 ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.
ಕುಂದಾಪುರ: ಸಿದ್ದಾಪುರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಲಾಗಿರುವ ಆಶ್ರಮದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ 13 ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.
‘ಬಡವರ ಸೇವೆ ಕ್ರಿಸ್ತರ ಸೇವೆ’ ಹಬ್ಬದ ಸಂದೇಶ ವಾಕ್ಯವಾಗಿದ್ದು, ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ನೂತನ ಆಶ್ರಮ ಉದ್ಘಾಟಿಸಿ ಆಶೀರ್ವದಿಸುವರು. ಬಳಿಕ ಮಹೋತ್ಸವದ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಕನ್ನಡ ಭಾಷೆಯಲ್ಲಿ ಪರಮ ಪ್ರಸಾದ ಆರಾಧನೆ ಮತ್ತು ಪವಿತ್ರ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ವಂ.ರೋಮನ್ ಪಿಂಟೊ ನೆರವೇರಿಸಲಿದ್ದಾರೆ.ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಪ್ರಸಿದ್ಧ ಕ್ರೈಸ್ತ ಯಾತ್ರಾಸ್ಥಳವಾಗಿದ್ದು, ಪಶ್ಚಿಮ ಘಟ್ಟಗಳ ಹಚ್ಚಹಸುರಿನ ತಪ್ಪಲಿನಲ್ಲಿ, ಬಾಳೆಬರೆ ಘಾಟ್‌ನ ಕೆಳಭಾಗದಲ್ಲಿರುವ ರಮಣೀಯ ತಾಣದಲ್ಲಿದೆ. ಈ ಪುಣ್ಯಕ್ಷೇತ್ರವು ತನ್ನದೇ ಆದ ಅದ್ಭುತ ಇತಿಹಾಸ ಮತ್ತು ಪವಾಡಗಳಿಗೆ ಹೆಸರುವಾಸಿಯಾಗಿದೆ.ಸುಮಾರು 400 ವರ್ಷಗಳ ಹಿಂದೆ, ಕೆರೆಕಟ್ಟೆಯ ಹೃದಯಭಾಗದಲ್ಲಿ ಒಬ್ಬ ಹಿಂದೂ ರೈತನು ತನ್ನ ಜಮೀನನ್ನು ಉಳುಮೆ ಮಾಡುತ್ತಿದ್ದಾಗ ಸಂತ ಅಂತೋನಿಯವರ ಮರದ ಪ್ರತಿಮೆ ಪತ್ತೆಹಚ್ಚಿದರು. ಬಸ್ರೂರಿನ ಸಂತ ಫಿಲಿಪ್ ನೆರಿ ಚರ್ಚ್ ವ್ಯಾಪ್ತಿಗೆ ಒಳಪಟ್ಟಿದ್ದ ಈ ಪವಿತ್ರ ಕ್ಷೇತ್ರವು, ಕೇವಲ 8 ಕುಟುಂಬಗಳು ಹಾಗೂ 22 ಸದಸ್ಯರನ್ನು ಒಳಗೊಂಡಿದೆ. 2013ರ ಜೂ.13ರಂದು ಅಧಿಕೃತವಾಗಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಿಸಲ್ಪಟ್ಟಿತು.ಪ್ರತಿ ಮಂಗಳವಾರ ಇಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಪವಿತ್ರ ಬಲಿಪೂಜೆ ಜರುಗುತ್ತದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಪ್ರತಿ ವರ್ಷ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವು ಫೆಬ್ರವರಿ ಮತ್ತು ಜೂನ್ ತಿಂಗಳುಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗುತ್ತದೆ.ನಿರ್ಗತಿಕರ ಆಶ್ರಮ: ಉಡುಪಿ ಧರ್ಮಪ್ರಾಂತ್ಯದ ಮೊದಲ ಧರ್ಮಾಧ್ಯಕ್ಷ, ಪ್ರಸ್ತುತ ನಿವೃತ್ತರಾಗಿರುವ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಸಮಾಜದಲ್ಲಿನ ನಿರ್ಗತಿಕರಿಗಾಗಿ ಏನಾದರೂ ಮಾಡಬೇಕು ಎನ್ನುವ ಹಂಬಲವಿತ್ತು. ಅದಕ್ಕಾಗಿ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಲ್ಲಿ ನಿರ್ಗತಿಕರಿಗಾಗಿ ಆಶ್ರಮ ನಿರ್ಮಿಸುವ ನಿರ್ಧಾರಕ್ಕೆ ಬಂದರು. ಪುಣ್ಯಕ್ಷೇತ್ರದ ರೆಕ್ಟರ್ ವಂ,ಸುನೀಲ್ ವೇಗಸ್ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 2023 ರ ಜೂ.13 ರಂದು ಅಂದಿನ ಧರ್ಮಾಧ್ಯಕ್ಷರಿಂದ ಶಿಲಾನ್ಯಾಸ ಮಾಡಿದ್ದು, ಪ್ರಸ್ತುತ ನಿರ್ಗತಿಕರ ವಾಸಕ್ಕಾಗಿ ಸಜ್ಜಾಗಿದೆ.ಆಶ್ರಮದಲ್ಲಿ 60 ಮಂದಿ ನಿರ್ಗತಿಕರಿಗೆ ವಾಸಕ್ಕೆ ಅವಕಾಶವಿದ್ದು ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಜೀವಿಸಲು ಅವಕಾಶ ನೀಡಲಾಗುತ್ತದೆ. ಇಲ್ಲಿ ವಾಸಿಸುವ ಫಲಾನುಭವಿಗಳಿಗೆ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಶ್ರಮದಲ್ಲಿ ವಾಸಿಸುವವರ ಮೇಲ್ವಿಚಾರಣೆಯನ್ನು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ನೇತೃತ್ವದಲ್ಲಿ ನಡೆಯಲಿದೆ. ವಾಸಿಗಳ ಊಟ ಹಾಗೂ ವಸತಿಯ ಖರ್ಚು ವೆಚ್ಚ ಸಂಪೂರ್ಣವಾಗಿ ದಾನಿಗಳು ಹಾಗೂ ಹಿತಚಿಂತಕರ ಸಹಕಾರದೊಂದಿಗೆ ನಡೆಯಲಿದ್ದು ಸಹೃದಯ ದಾನಿಗಳ ನೆರವಿಗೆ ಅವಕಾಶವಿದೆ.
ಹಿಂದಿನ ಧರ್ಮಾಧ್ಯಕ್ಷರ ಕನಸಿನ ಯೋಜನೆಗೆ ದಾನಿಗಳ ನೆರವಿನೊಂದಿಗೆ ಸುಸಜ್ಜಿತವಾದ ನಿರ್ಗತಿಕರ ಆಶ್ರಮವನ್ನು ನಿರ್ಮಿಸಲಾಗಿದ್ದು ನೆಲೆ ಇಲ್ಲದ ವ್ಯಕ್ತಿಗಳ ಮುಂದಿನ ಜೀವನ ಶಾಂತಿಯುತವಾಗಿ ಸಾಗಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಪುಣ್ಯಕ್ಷೇತ್ರದ ರೆಕ್ಟರ್ ವಂ.ಸುನೀಲ್ ವೇಗಸ್. ನಿರ್ಗತಿಕರಿಗೆ ಏನಾದರೂ ತನ್ನಿಂದ ಆದ ಸಹಾಯ ಮಾಡಬೇಕು ಎಂಬ ಹಂಬಲಕ್ಕೆ ಉಡುಪಿ ಧರ್ಮಪ್ರಾಂತ್ಯದ ಅಂದಿನ ಧರ್ಮಾಧ್ಯಕ್ಷರ ಕನಸಿಗೆ ದನಿಯಾಗಿ ಈ ಆಶ್ರಮ ನಿರ್ಮಾಣದಲ್ಲಿ ಪುಣ್ಯಕ್ಷೇತ್ರದ ನಿರ್ದೇಶಕರೊಂದಿಗೆ ಸೇರಿ ತನ್ನಿಂದ ಆದ ಸಹಾಯ ಸಹಕಾರವನ್ನು ನೀಡಿರುತ್ತೇನೆ. ಮುಂದೆಯೂ ನನ್ನ ಸಹಕಾರ ನೀಡಲಿದ್ದೇನೆ ಎನ್ನುತ್ತಾರೆ ಆಶ್ರಮದ ಮಹಾದಾನಿಗಳಲ್ಲಿ ಓರ್ವರಾದ ಫಿಲಿಪ್ ಡಿಕೋಸ್ತಾ ಬಸ್ರೂರು.ಆಶ್ರಮದ ಅಭಿವೃದ್ದಿಯ ನಿಟ್ಟಿನಲ್ಲಿ ದಾನಿಗಳಿಗೆ ಪ್ರೋತ್ಸಾಹ ಸಹಕಾರ ನೀಡಲು ಅವಕಾಶವಿದ್ದು ಪುಣ್ಯಕ್ಷೇತ್ರ ರೆಕ್ಟರ್ ಅವರನ್ನು ಸಂಪರ್ಕಿಸಬಹುದು ಎಂದು ವಂ.ಸುನೀಲ್ ವೇಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.