ಸಾರಾಂಶ
ಹಳಿಯಾಳ: ಹಿಂದೂ ಸಮಾಜದವರಿಗೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಲು ಆಗ್ರಹಿಸಿ ಕೆಸರೊಳ್ಳಿ ಗ್ರಾಮಸ್ಥರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಭೂಮಿಯ ಸಮಸ್ಯೆಯನ್ನು ಬಗೆಹರಿಸಲು ತಾಲೂಕಾಡಳಿತಕ್ಕೆ ಸೆ. 23ರ ವರೆಗೆ ಗಡುವು ನೀಡಿದರು.
ಮಾಜಿ ಶಾಸಕ ಸುನೀಲ ಹೆಗಡೆ ಅವರ ಮುಂದಾಳತ್ವದಲ್ಲಿ ಪಟ್ಟಣದಲ್ಲಿ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕೆಸರೊಳ್ಳಿ ಗ್ರಾಮದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ತಾಲೂಕಾಡಳಿತ ಸೌಧಕ್ಕೆ ತೆರಳಿ ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿಯವರಿಗೆ ಮನವಿಯನ್ನು ಸಲ್ಲಿಸಿದರು.ತಾಲೂಕಾಡಳಿದ ನಿರ್ಲಕ್ಷ್ಯ: ಕೆಸರೊಳ್ಳಿ ಗ್ರಾಮಸ್ಥರು ಕಳೆದ 25 ವರ್ಷಗಳಿಂದ ಸರ್ವೆ ನಂ. 66ಬ/35ರಲ್ಲಿ ಜಮೀನನ್ನು ಸ್ಮಶಾನವೆಂದು ಬಳಕೆ ಮಾಡುತ್ತಿದ್ದು, ಈ ಜಮೀನನ್ನು ಹಿಂದೂ ಸ್ಮಶಾನವೆಂದೂ ದಾಖಲಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗ, ಅಧಿಕಾರಿಗಳು ಈ ಗ್ರಾಮದಲ್ಲಿ ಕೇವಲ 35 ಗುಂಟೆ ಸಾರ್ವಜನಿಕ ಸ್ಮಶಾನ ಇದ್ದು, ಹಾಗಾಗಿ ಮಂಜೂರಿ ಮಾಡಲು ಆಗುವುದಿಲ್ಲ ಎಂದು ಕಾರಣ ನೀಡಿದ್ದಾರೆ.ಕೆಸರೊಳ್ಳಿ ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮಾಜದವರು ಇದ್ದು, ಅಧಿಕಾರಿಗಳ ಹೇಳಿಕೆಯಂತೆ ಸಾರ್ವಜನಿಕ ಸ್ಮಶಾನ ಬಳಸಲು ಹೋದರೆ ಗಲಭೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಹಿಂದೂಗಳಿಗಾಗಿ ಬಳಸಲು ಈ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸ್ಮಶಾನ ಭೂಮಿ ಮೂಲ ಅವಶ್ಯಕತೆಯಾಗಿದೆ. ಹೀಗಿರುವಾಗ ತಾಲೂಕಾಡಳಿತ ಕೆಸರೊಳ್ಳಿ ಗ್ರಾಮಸ್ಥರ ಅವಶ್ಯಕ ಬೇಡಿಕೆಯ ಬಗ್ಗೆ ಅಸಡ್ಡೆ ತೋರದೇ ಬೇಗನೆ ಸಮಸ್ಯೆ ಬಗೆಹರಿಸಬೇಕು. ಅದಕ್ಕಾಗಿ ಹಿಂದೂ ಸ್ಮಶಾನ ಜಮೀನಿನ ಸಮಸ್ಯೆ ಬಗೆಹರಿಸಲು ತಾಲೂಕಾಡಳಿತಕ್ಕೆ ಸೆ. 23ರ ವರೆಗೆ ಗಡುವು ನೀಡುತ್ತಿದ್ದೇವೆ. ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಗ್ರಾಮದ ಹಿರಿಯರಾದ ಗಿರಿಜಾರಾಮ ಅಳವಣಕರ, ವಿಠ್ಠಲ ಕೆಸರೇಕರ, ಪರಶುರಾಮ ಕರಗಸ್ಕರ್, ಡೋಂಗ್ರು ಜುವೇಕರ, ಆನಂದ ಗುಡಗೇರಿ, ರಾಘವೇಂದ್ರ ನಾಯ್ಕ, ಸುರೇಶ ಶಹಾಪುರಕರ, ಮಂಜುನಾಥ ಕೆಸರೆಕರ, ಸಿದ್ದರಾಮ ಶೇಡಿ, ಅಜೋಬಾ ಕೇಸರೆಕರ, ಸೋಮನಿಂಗ ಮೋರಿ, ಫಕೀರಪ್ಪ ಕುರುಬುರ, ನರಸಿಂಹ ಮಡಿವಾಳ, ರಮೇಶ ಗುಡಗೇರಿ ಹಾಗೂ ಇತರರು ಇದ್ದರು ಸಿಪಿಐ ಜೈಪಾಲ ಪಾಟೀಲ ಹಾಗೂ ಪಿಎಸ್‌ಐ ವಿನೋದ ರೆಡ್ಡಿಯವರ ಮುಂದಾಳತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.