ಸಾರಾಂಶ
ರಾಜ್ಯ ಮಹಿಳಾ ನಿಲಯವನ್ನು ಅಲ್ಲಿನ ನಿವಾಸಿಗಳು ಸಂಭ್ರಮದಿಂದ ತಳಿರು, ತೋರಣ ಕಟ್ಟಿ, ರಂಗೋಲಿ ಹಾಕಿ ಮದುವೆ ಮಂಟಪವನ್ನಾಗಿಸಿದ್ದರು. ಬಂದ ಅತಿಥಿಗಳು, ವಧುವರರಿಗೆ ಶುಭಹಾರೈಸಿ, ಸಿಹಿ ಭೋಜನವನ್ನು ಸವಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯೋಜನೆಯಲ್ಲಿ ಇಲ್ಲಿನ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಸಂಸ್ಥೆಯ ನಿವಾಸಿ ಖುಷ್ಬು ಸುಮೇರಾ ಅವರ ವಿವಾಹವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಧುರಾಜ್ ಎ.ಡಿ. ಅವರೊಂದಿಗೆ ಶುಕ್ರವಾರ ನಡೆಯಿತು.ವಾದ್ಯ, ಮೇಳಗಳೊಂದಿಗೆ ಸಂಭ್ರಮದಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಶಾಸ್ತ್ರೋಕ್ತವಾಗಿ ವಧುವಿಗೆ ಧಾರೆ ಎರೆದು ಕನ್ಯಾದಾನ ಮಾಡಿದರು.ಮಧುರಾಜ್ ಅವರು ಪದವಿಧರರಾಗಿದ್ದು, ಜೀವನ ನಿರ್ವಹಣೆಗಾಗಿ ಕೃಷಿ ಮತ್ತು ಕ್ಯಾಟರಿಂಗ್‌ನಲ್ಲಿ ತೊಡಗಿಕೊಂಡು, ಆರ್ಥಿಕವಾಗಿ ಸದೃಢರಾಗಿದ್ದಾರೆ. ಅವರು ಮಹಿಳಾ ನಿಲಯದ ನಿವಾಸಿಯನ್ನು ಮದುವೆಯಾಗಲು ಬಯಸಿದಾಗ ಪೊಲೀಸ್ ಹಾಗೂ ರಾಜ್ಯ ನಿಲಯದ ಸಿಬ್ಬಂದಿ ಅವರ ಹಿನ್ನೆಲೆಯನ್ನು ಪರಿಶೀಲಿಸಿ, ಆರೋಗ್ಯ ದೃಢೀಕರಣ ಪಡೆದುಕೊಂಡು, ಹುಡುಗಿ ಒಪ್ಪಿಗೆಯೊಂದಿಗೆ ಈ ಶುಭಕಾರ್ಯವನ್ನು ಅದ್ದೂರಿಯಾಗಿ ದಾನಿಗಳು ಸಹಕಾರದಿಂದ ನಡೆಸಲಾಯಿತು.ಸರ್ಕಾರದಿಂದ ವಧುವಿನ ಹೆಸರಿನಲ್ಲಿ ಮುಂದಿನ ಜೀವನ ನಿರ್ವಹಣೆಗೆ 20,000 ರು. ನೀಡಲಾಗಿದ್ದು, ಪ್ರತೀ ಮೂರು ತಿಂಗಳಿಗೊಮ್ಮೆ ಮೂರು ವರ್ಷದ ವರೆಗೆ ಇಲಾಖೆಯು ವಧು-ವರರ ಮುಂದಿನ ಜೀವನದ ಮೇಲೆ ನಿಗಾ ವಹಿಸಲಾಗುವುದು ಎಂದು ಡಿಸಿ ಹೇಳಿದರು.
ಪ್ರಸ್ತುತ ಮಹಿಳಾ ನಿಲಯದಲ್ಲಿ 66 ಮತ್ತು ಮೂರು ಮಕ್ಕಳು ಸೇರಿದಂತೆ ಒಟ್ಟು 69 ಮಂದಿ ಇದ್ದು, ಮಹಿಳಾ ನಿಲಯದಲ್ಲಿ ವಾಸವಿರುವ ಹುಡುಗಿಯರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಭವಿಷ್ಯದ ಬಗೆಗಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು.ರಾಜ್ಯ ಮಹಿಳಾ ನಿಲಯವನ್ನು ಅಲ್ಲಿನ ನಿವಾಸಿಗಳು ಸಂಭ್ರಮದಿಂದ ತಳಿರು, ತೋರಣ ಕಟ್ಟಿ, ರಂಗೋಲಿ ಹಾಕಿ ಮದುವೆ ಮಂಟಪವನ್ನಾಗಿಸಿದ್ದರು. ಬಂದ ಅತಿಥಿಗಳು, ವಧುವರರಿಗೆ ಶುಭಹಾರೈಸಿ, ಸಿಹಿ ಭೋಜನವನ್ನು ಸವಿದರು.ಕಾರ್ಯಕ್ರಮದಲ್ಲಿ ಎಎಸ್ಪಿ ಟಿ. ಸಿದ್ದಲಿಂಗಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.