ಸಾರಾಂಶ
ಕುಷ್ಟಗಿ ತಾಲೂಕಿನ ಕೇಸೂರು ಪಿಡಿಒ ಅಮೀನ್‌ಸಾಬ್ ಅಲಾಂದಾರ ಅವರಿಗೆ ಬೇರೊಂದು ಗ್ರಾಪಂ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಿರುವ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಗ್ರಾಪಂಗೆ ಆಗಮಿಸಿಲ್ಲ. ಹೀಗಾಗಿ ಯಾವುದೇ ಕೆಲಸವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕುಷ್ಟಗಿ: ತಾಲೂಕಿನ ಕೇಸೂರು ಪಿಡಿಒ ಅಮೀನ್‌ಸಾಬ್ ಅಲಾಂದಾರ ಅವರಿಗೆ ಬೇರೊಂದು ಗ್ರಾಪಂ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಿರುವ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಗ್ರಾಪಂಗೆ ಆಗಮಿಸಿಲ್ಲ. ಹೀಗಾಗಿ ಯಾವುದೇ ಕೆಲಸವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಅದರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸಮಸ್ಯೆಗಳು ಹೆಚ್ಚುತ್ತಿವೆ. ಕೂಡಲೇ ಮೇಲಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕೇಸೂರು ಗ್ರಾಪಂ ಕಾರ್ಯಾಲಯವು ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರದ ಹೊರವಲಯದಲ್ಲಿದೆ. ವಿವಿಧ ಕೆಲಸಕ್ಕೆ ಬರುವ ಸಾರ್ವಜನಿಕರು ವಿಚಾರಿಸಿದಾಗ ಪಿಡಿಒ ಬಂದಿಲ್ಲ, ಮೀಟಿಂಗ್ ಇದೆ ಎಂದು ಸಿಬ್ಬಂದಿ ಉತ್ತರಿಸುತ್ತಾರೆ. ಹೀಗಾಗಿ ಕೆಲಸವಾಗದೇ ನಿರಾಸೆಯಿಂದ ಮರಳುವಂತಾಗಿದೆ.
ಅಡುಗೆ ಸಿಬ್ಬಂದಿ ನೇಮಕ ವಿಳಂಬ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓರ್ವ ಅಡುಗೆಯ ಸಿಬ್ಬಂದಿ ನಿವೃತ್ತಿ ಹಿನ್ನೆಲೆಯಲ್ಲಿ ಹೊಸ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ. ಪಿಡಿಒ ಆಗಮಿಸದ ಹಿನ್ನೆಲೆಯಲ್ಲಿ ಅಡುಗೆಯ ಸಿಬ್ಬಂದಿ ನೇಮಕಾತಿ ವಿಳಂಬವಾಗುತ್ತಿದೆ. ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೆಲಸ ನೀಡುವಂತೆ ಅರ್ಜಿ ಕೊಟ್ಟು ಸುಮಾರು ಒಂದು ತಿಂಗಳಾಗುತ್ತಾ ಬಂದರೂ ಕೆಲಸ ನೀಡುತ್ತಿಲ್ಲ.ಅಡುಗೆ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಎರಡು ದಿನಗಳಲ್ಲಿ ಅಂತಿಮಗೊಳಿಸಿ ಆದೇಶ ನೀಡಲಾಗುತ್ತದೆ ಎಂದು ಕೇಸೂರು ಪಿಡಿಒ ಅಮೀನ್‌ಸಾಬ್ ಅಲಾಂದಾರ ಹೇಳಿದರು.