ಖಾದಿ ಗ್ರಾಮದ್ಯೋಗ ಕೇಂದ್ರದ ಪುನಶ್ಚೇತನ ನಿರ್ಲಕ್ಷ್ಯ

| Published : Nov 14 2025, 03:30 AM IST

ಸಾರಾಂಶ

ಸರ್ಕಾರ ಸಹಿತ ಖಾದಿ ಬಟ್ಟೆಗಳ ಉತ್ಪಾದನೆ, ಮಾರಾಟಕ್ಕೆ ರಿಯಾಯಿತಿ ನೀಡುವದರ ಜತೆಗೆ ಅನೇಕ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದರೂ ಸಹಿತ ಸಂಬಂಧಿಸಿದ ಖಾದಿ ಮಂಡಳಿ, ಸಹಕಾರಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಸ್ಥಗಿತಗೊಂಡ ಖಾದಿ ಕೇಂದ್ರಗಳನ್ನು ಆರಂಭ ಮಾಡದಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಖಾದಿಯ ಖದರ್ ಕ್ಷೀಣಿಸುತ್ತಿದ್ದು, ಅವನತಿ ಅಂಚಿನಲ್ಲಿರುವ ಖಾದಿ ಗ್ರಾಮದ್ಯೋಗ, ಉತ್ಪಾದನಾ ಕೇಂದ್ರಗಳ ಪುನಶ್ಚೇತನ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಿದೆ.

ತಾಲೂಕಿನ ದೋಟಿಹಾಳದಲ್ಲಿರುವ ಖಾದಿ ಗ್ರಾಮದ್ಯೋಗ ಕೇಂದ್ರ ಸ್ಥಗಿತಗೊಂಡು ಐದು ವರ್ಷ ಗತಿಸಿದರೂ ಸಹಿತ ಇಲ್ಲಿಯವರೆಗೆ ಕೇಂದ್ರದ ಬಾಗಿಲು ತೆರೆಯಲು ಅಧಿಕಾರಿಗಳು ಮುಂದಾಗದಿರುವದು ವಿಪರ್ಯಾಸದ ಸಂಗತಿ.

ಇತ್ತೀಚಿನ ದಿನಗಳಲ್ಲಿ ಖಾದಿ ಬಟ್ಟೆಗೆ ಡಿಮ್ಯಾಂಡ್ ಹೆಚ್ಚುತ್ತಿದ್ದು, ಸರ್ಕಾರ ಸಹಿತ ಖಾದಿ ಬಟ್ಟೆಗಳ ಉತ್ಪಾದನೆ, ಮಾರಾಟಕ್ಕೆ ರಿಯಾಯಿತಿ ನೀಡುವದರ ಜತೆಗೆ ಅನೇಕ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದರೂ ಸಹಿತ ಸಂಬಂಧಿಸಿದ ಖಾದಿ ಮಂಡಳಿ, ಸಹಕಾರಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಬಲವಾದ ಆರೋಪವಾಗಿದೆ.

ದೋಟಿಹಾಳ ಖಾದಿ ಗ್ರಾಮದ್ಯೋಗ ಕೇಂದ್ರದ ಕಾರ್ಯದರ್ಶಿ ನಾರಾಯಣಪ್ಪ ಪತ್ತಾರ ನಿಧನಗೊಂಡ ಕಾರಣ ಕೇಂದ್ರದ ಕಾರ್ಯ ಸ್ಥಗಿತಗೊಂಡಿತು. ಈಗ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡು ಎರಡು ವರ್ಷ ಕಳೆದರೂ ಆಡಳಿತ ಮಂಡಳಿಯ ರಚನೆಗಾಗಲಿ, ಕೇಂದ್ರ ಪ್ರಾರಂಭ ಮಾಡುವದಕ್ಕೆ ಮುಂದೆ ಬರುತ್ತಿಲ್ಲ ಅಧಿಕಾರಿಗಳು.

ಈ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ನೇಯುವ ಕೈ ಮಗ್ಗಗಳು, ನೂಲು, ಸೇರಿದಂತೆ ಲಕ್ಷಾಂತರ ಮೊತ್ತದ ಸಂಬಂಧಪಟ್ಟ ಸಾಮಗ್ರಿ ತುಂಬಿಕೊಂಡಿದ್ದು, ಧೂಳು ತಿಂದು ಕ್ರಿಮಿಕೀಟಗಳ ಪಾಲಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯ ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಕೆಲಸ ನಿಲ್ಲಿಸಿವೆ. ಇದನ್ನೇ ಅವಲಂಬಿಸಿದ್ದ ಕೆಲ ನೇಕಾರ ಕುಟುಂಬಗಳು ಬದುಕು ಸಾಗಿಸಲು ಚರಕ ಕೈಬಿಟ್ಟು ಪರ್ಯಾಯ ಮಾರ್ಗದಲ್ಲಿ ಸಾಗುವಂತಾಗಿದೆ.

ಖಾದಿ ಬಟ್ಟೆ ತಯಾರಿಕೆ: ಈ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ಹಲವು ವರ್ಷಗಳ ಹಿಂದೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಕೇಂದ್ರದಲ್ಲಿ ಲುಂಗಿ, ಟವೆಲ್, ಧೋತಿ ಸೇರಿದಂತೆ ವಿವಿಧ ಬಟ್ಟೆ ತಯಾರಾಗುತ್ತಿದ್ದವು ಹಾಗೂ ಮೃತಪಟ್ಟ ಕಾರ್ಯದರ್ಶಿ ನಾರಾಯಣಪ್ಪ ಪತ್ತಾರ ತಮ್ಮ ಅಧಿಕಾರವಧಿಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಬಟ್ಟೆ ತಂದು ಮಾರಾಟ ಮಾಡುತ್ತಿದ್ದರು. ಆದರೆ ಈಗ ಉತ್ಪಾದನ ಕೇಂದ್ರ ಬಂದ್ ಆಗಿದ್ದು ಬಟ್ಟೆ ತಯಾರಿಕೆ ಹಾಗೂ ಮಾರಾಟ ಸ್ಥಗಿತಗೊಂಡಿದೆ.

ಅವನತಿಯತ್ತ ತಾವರಗೇರಾ ಖಾದಿ ಉತ್ಪಾದನಾ ಕೇಂದ್ರ: ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿರುವ ಖಾದಿ ಉತ್ಪಾದನಾ ಕೇಂದ್ರ ಅವನತಿ ಅಂಚಿನಲ್ಲಿದ್ದು, ಸುಮಾರು ಐದು ವರ್ಷಗಳಿಂದ ಉತ್ಪಾದನೆ, ಮಾರಾಟ ನಿಲ್ಲಿಸಲಾಗಿದ್ದು ಈ ಹಿಂದೆ ಸುಮಾರು 70 ಜನ ಕೆಲಸ ಮಾಡುತ್ತಿದ್ದರು, ಆದರೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗದ ಕಾರಣ ಎಲ್ಲವೂ ಸ್ಥಗಿತಗೊಂಡಿವೆ.

ಇಲ್ಲಿ ಕೆಲಸ ಮಾಡುತ್ತಿದ್ದ ಪ್ರಹ್ಲಾದಾಚಾರ್ ಕಟ್ಟಿ ಎಂಬುವವರು ನಿವೃತ್ತಿ ನಂತರವೂ ಖಾದಿ ಉತ್ಪಾದನಾ ಕೇಂದ್ರ ಮುನ್ನಡೆಸಿಕೊಂಡು ಹೊರಟಿದ್ದಾರೆ. ಈ ಖಾದಿ ಉತ್ಪಾದನಾ ಕೇಂದ್ರಕ್ಕೆ ಸಂಬಂಧಿಸಿದಂತೆ 3ಎಕರೆಗೂ ಅಧಿಕ ಆಸ್ತಿ ಹೊಂದಿದ್ದು ಸರ್ಕಾರ ಕೇಂದ್ರದತ್ತ ಗಮನಹರಿಸಿ ಅಭಿವೃದ್ದಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ದೋಟಿಹಾಳ ಖಾದಿ ಕೇಂದ್ರ ಸ್ಥಗಿತಗೊಂಡಿದ್ದು, ದೋಟಿಹಾಳದ ನಿವಾಸಿಗಳು ಸಹಕಾರ ಇಲಾಖೆಗೆ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಿದರೆ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕುಷ್ಟಗಿ ಸಹಕಾರ ಅಭಿವೃದ್ದಿ ಅಧಿಕಾರಿಗಳು ಸ್ವಾತಿ ಹೇಳಿದರು.

ದೋಟಿಹಾಳ ಖಾದಿ ಗ್ರಾಮದ್ಯೋಗ ಕೇಂದ್ರ ಆರಂಭಿಸುವಲ್ಲಿ ಸಹಕಾರಿ ಇಲಾಖೆ ಹಾಗೂ ಖಾದಿ ಗ್ರಾಮದ್ಯೋಗ ಮಂಡಳಿಯವರ ನಿರ್ಲಕ್ಷತನ ತೋರುತ್ತಿದ್ದು, ಆಡಳಿತ ಮಂಡಳಿ ರಚನೆ, ಕಾರ್ಯದರ್ಶಿ ನೇಮಕ ಮಾಡಿ ಸ್ಥಗಿತಗೊಂಡ ಖಾದಿ ಕೇಂದ್ರ ಆರಂಭಿಸಬೇಕು ಕೆಲ ಕುಟುಂಬಗಳಿಗೆ ಕೆಲಸ ಕೊಟ್ಟಂತಾಗುತ್ತದೆ ಎಂದು ದೋಟಿಹಾಳ ನಿವಾಸಿ ಶ್ರೀನಿವಾಸ ಕಂಟ್ಲಿ ತಿಳಿಸಿದ್ದಾರೆ.

ಇಂದಿನ ದಿನಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವವರು ಯಾರೂ ಇಲ್ಲ, ಕಾರಣ ರಾಟಿ ಬಂದ್ ಮಾಡಲಾಗಿದೆ. ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಖಾದಿ ಕೇಂದ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಾವರಗೇರಾ ಖಾದಿ ಉತ್ಪಾದನಾ ಕೇಂದ್ರದ ವ್ಯವಸ್ಥಾಪಕ ಪ್ರಹ್ಲಾದಚಾರ್ ಕಟ್ಟಿ ತಿಳಿಸಿದ್ದಾರೆ.