ದೋಟಿಹಾಳದ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಗಿತ

| Published : Nov 14 2024, 12:52 AM IST

ದೋಟಿಹಾಳದ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಗಿತಗೊಂಡು ಸುಮಾರು ನಾಲ್ಕು ವರ್ಷಗಳಾದರೂ ಕೇಂದ್ರದ ಬಾಗಿಲು ತೆರೆದಿಲ್ಲ.

ಕಾರ್ಯಾರಂಭಕ್ಕಾಗಿ ಸಾರ್ವಜನಿಕರ ಒತ್ತಾಯ । ಸಹಕಾರ ಇಲಾಖೆ ಅಧಿಕಾರಿಗಳು, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ಲಕ್ಷ್ಯ; ಆರೋಪಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಗಿತಗೊಂಡು ಸುಮಾರು ನಾಲ್ಕು ವರ್ಷಗಳಾದರೂ ಕೇಂದ್ರದ ಬಾಗಿಲು ತೆರೆದಿಲ್ಲ.

ಇತ್ತೀಚಿನ ದಿನಗಳಲ್ಲಿ ಖಾದಿ ಬಟ್ಟೆಗೆ ಭಾರಿ ಡಿಮ್ಯಾಂಡ್ ಹೆಚ್ಚುತ್ತಿದ್ದು, ಸರ್ಕಾರವೂ ಸಹಿತ ಖಾದಿ ಬಟ್ಟೆಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಆದರೆ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸ್ಥಗಿತಗೊಂಡ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಕಾರ್ಯಾರಂಭ ಮಾಡುವುದಕ್ಕೆ ಸಹಕಾರ ಇಲಾಖೆ ಅಧಿಕಾರಿಗಳು ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿಗಳು ಮುಂದಾಗುತ್ತಿಲ್ಲ. ಜಾಣ ಕುರುಡತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಕೇಂದ್ರದ ಕಾರ್ಯದರ್ಶಿಯಾಗಿದ್ದ ನಾರಾಯಣಪ್ಪ ಪತ್ತಾರ ನಿಧನರಾದ ಕಾರಣ ಕೇಂದ್ರದ ಕಾರ್ಯವೂ ಸ್ಥಗಿತಗೊಂಡಿತು. ಈಗ ಇದರ ಜತೆಗೆ ಅಲ್ಲಿನ ಆಡಳಿತ ಮಂಡಳಿಯ ಅವಧಿಯು ಮುಕ್ತಾಯಗೊಂಡು ಹಲವು ತಿಂಗಳುಗಳೆ ಕಳೆದರೂ ಸಹಿತ ಆಡಳಿತ ಮಂಡಳಿಯ ರಚನೆಗಾಗಲಿ ಅಥವಾ ಕೇಂದ್ರ ಪ್ರಾರಂಭ ಮಾಡುವುದಕ್ಕೆ ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಈ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನೇಯ್ಯುವ ಕೈ ಮಗ್ಗಗಳು, ನೂಲು ಸೇರಿದಂತೆ ಲಕ್ಷಾಂತರ ರುಪಾಯಿ ಮೊತ್ತದ ಸಂಬಂಧಪಟ್ಟ ಸಾಮಗ್ರಿ ತುಂಬಿಕೊಂಡಿದ್ದು, ಧೂಳು ತಿಂದು ಕ್ರಿಮಿಕೀಟಗಳ ಪಾಲಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆಯ ಕೊರತೆಯಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿವೆ. ಇದನ್ನೇ ಅವಲಂಬಿಸಿದ್ದ ಕೆಲವು ನೇಕಾರ ಕುಟುಂಬಗಳು ಬದುಕು ಸಾಗಿಸಲು ಚರಕ ಕೈಬಿಟ್ಟು ಪರ್ಯಾಯ ಮಾರ್ಗದತ್ತ ಸಾಗಿದ್ದಾರೆ.

ಖಾದಿ ಬಟ್ಟೆ ತಯಾರಿಕೆ:

ಈ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಹಲವು ವರ್ಷಗಳ ಹಿಂದೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಕೇಂದ್ರದಲ್ಲಿ ಲುಂಗಿ, ಟವೆಲ್, ಧೋತಿ ಸೇರಿದಂತೆ ವಿವಿಧ ಬಟ್ಟೆಗಳು ತಯಾರಾಗುತ್ತಿದ್ದವು. ಮೃತಪಟ್ಟ ಕಾರ್ಯದರ್ಶಿ ನಾರಾಯಣಪ್ಪ ಪತ್ತಾರ ತಮ್ಮ ಅಧಿಕಾರವಧಿಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಬಟ್ಟೆಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಆದರೆ ಈಗ ಉತ್ಪಾದನಾ ಕೇಂದ್ರ ಬಂದ್ ಆಗಿದ್ದು ಬಟ್ಟೆ ತಯಾರಿಕೆ ಹಾಗೂ ಮಾರಾಟ ಸ್ಥಗಿತಗೊಂಡಿದೆ.

ಆಡಳಿತ ಮಂಡಳಿ ರಚಿಸಿ:

ಈ ಗ್ರಾಮೋದ್ಯೋಗ ಕೇಂದ್ರಕ್ಕೆ ಈ ಹಿಂದೆ ಇರುವ ಆಡಳಿತ ಮಂಡಳಿಯ ಅವಧಿಯೂ ಸಂಪೂರ್ಣವಾಗಿ ಮುಗಿದು ಹೋಗಿ ಹಲವು ತಿಂಗಳುಗಳೆ ಕಳೆದಿವೆ. ಸಹಕಾರ ಇಲಾಖೆಯ ಅಧಿಕಾರಿಗಳು ಈ ಗ್ರಾಮೋದ್ಯೋಗ ಕೇಂದ್ರವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಉತ್ತಮವಾದ ಆಡಳಿತ ಮಂಡಳಿ ರಚಿಸಿ, ಕಾರ್ಯದರ್ಶಿ ನೇಮಕಾತಿ ಮಾಡುವ ಮೂಲಕ ಖಾದಿ ಗ್ರಾಮೋದ್ಯೋಗ ಕೇಂದ್ರ ಆರಂಭಿಸಬೇಕಾಗಿದೆ.