ಕನ್ನಡಪ್ರಭ ವಾರ್ತೆ ಬೆಳಗಾವಿ ಕಬ್ಬಿಗೆ ನ್ಯಾಯಯುತ ಬೆಲೆ ಹಾಗೂ ಪ್ರತಿ ಟನ್ಗೆ ರಾಜ್ಯ ಸರ್ಕಾರವು ₹1000 ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ರೈತರು ಬೆಳಗಾವಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿ ತೀವ್ರ ಹಿಂಸಾಸ್ವರೂಪ ಪಡೆದುಕೊಂಡಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬಿಗೆ ನ್ಯಾಯಯುತ ಬೆಲೆ ಹಾಗೂ ಪ್ರತಿ ಟನ್ಗೆ ರಾಜ್ಯ ಸರ್ಕಾರವು ₹1000 ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ರೈತರು ಬೆಳಗಾವಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿ ತೀವ್ರ ಹಿಂಸಾಸ್ವರೂಪ ಪಡೆದುಕೊಂಡಿತು. ರಾಜ್ಯ ಮತ್ತು ಜಿಲ್ಲೆಯ ನಾನಾ ಭಾಗಗಳಿಂದ ಬೆಳಗಾವಿ ನಗರದತ್ತ ಬರುತ್ತಿದ್ದ ರೈತರನ್ನು ತಡೆದ ಪೊಲೀಸರು, ಅಲ್ಲಿಯೇ ಅವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ರೈತರು ಬೃಹತ್ ಹೋರಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಕಮಿಷನರ್ ನಿಷೇಧಾಜ್ಞೆ ಜಾರಿಗೊಳಿಸಿ ಬುಧವಾರವೇ ಆದೇಶ ಹೊರಡಿಸಿದ್ದರು. ರೈತರ ಹೋರಾಟ ಹತ್ತಿಕ್ಕಲು ಮುಂದಾದ ಪೊಲೀಸರು, ಬೆಳಗಾವಿ ಹೊರವಲಯದ ಭೂತರಾಮನಹಟ್ಟಿ ಬಳಿಯ ಮುಕ್ತಿಮಠದಲ್ಲಿ ವಾಸ್ತವ್ಯ ಹೂಡಿದ್ದ ನೂರಾರು ರೈತರು ಬೆಳಗಾವಿಯತ್ತ ಬರುತ್ತಿದ್ದಂತೆಯೇ ಗುರುವಾರ ಬೆಳಗ್ಗೆ ವಶಕ್ಕೆ ಪಡೆದರು. ರೈತರು ಬೆಳಗಾವಿ ನಗರ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದ ಜಿಲ್ಲಾಡಳಿತ, ಬೆಳಗ್ಗೆಯಿಂದಲೇ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ನೇತೃತ್ವದಲ್ಲಿ ಬೆಳಗ್ಗೆ 11ಗಂಟೆಗೆ ಮುಕ್ತಿಮಠದಿಂದ ಬೆಳಗಾವಿ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲು ರೈತರು ಸಜ್ಜಾಗಿದ್ದರು. ಇದಕ್ಕೆ ಅವಕಾಶ ನೀಡದ ಪೊಲೀಸರು, ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ಡಿಸಿಪಿ, ಮೂವರು ಎಸಿಪಿಗಳು, ಹತ್ತಕ್ಕೂ ಅಧಿಕ ಡಿಎಆರ್ ತುಕಡಿಗಳು ಸೇರಿದಂತೆ ಐನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದರು. ರೈತರು ಗುಂಪುಗೂಡುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಚುನಪ್ಪ ಪೂಜೇರಿ ಸೇರಿದಂತೆ ನೂರಾರು ಹೋರಾಟಗಾರರನ್ನು ಮೊದಲು ತಮ್ಮ ವಶಕ್ಕೆ ಪಡೆದರು.
ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಸುಮ್ಮನೆ ನಿಂತಿದ್ದ ರೈತರನ್ನು ಏಕೆ ವಶಕ್ಕೆ ಪಡೆಯುತ್ತಿದ್ದೀರಿ ಎಂದು ಹೋರಾಟಗಾರರು ಪೊಲೀಸರನ್ನು ಪ್ರಶ್ನಿಸಿದರು. ಕೆಲ ರೈತರನ್ನು ಎಳೆದೆಳೆದು ಪೊಲೀಸ್ ವಾಹನಗಳಿಗೆ ಹತ್ತಿಸುತ್ತಿದ್ದ ದೃಶ್ಯಗಳು ಕಂಡುಬಂದವು. ರೈತರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸ್ ಬಲ ಪ್ರಯೋಗಿಸುತ್ತಿದೆ ಎಂದು ಚುನಪ್ಪ ಪೂಜೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಬಂಧಿಸಿದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ಮುಖ್ಯಮಂತ್ರಿ ರೈತರಿಗೆ ಕೊಟ್ಟ ಮಾತಿನಂತೆ ಪ್ರೋತ್ಸಾಹಧನ ಘೋಷಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.ಜಿಲ್ಲೆಯಾದ್ಯಂತ ರೈತರಿಗೆ ತಡೆ:
ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ನಗರಕ್ಕೆ ಆಗಮಿಸುತ್ತಿದ್ದ ರೈತರನ್ನೂ ಪೊಲೀಸರು ತಡೆದರು. ಚಿಕ್ಕೋಡಿ ತಾಲೂಕಿನ ಬೇಡಕಿಹಾಳ, ನೇಜ ಕ್ರಾಸ್ ಸೇರಿದಂತೆ ವಿವಿಧೆಡೆ ಕ್ರೂಸರ್ ವಾಹನಗಳಲ್ಲಿ ಬರುತ್ತಿದ್ದ ರೈತರನ್ನು ವಶಕ್ಕೆ ಪಡೆಯಲಾಯಿತು. ಮೂಡಲಗಿ ತಾಲೂಕಿನಲ್ಲಿ ರೈತ ಮುಖಂಡ ಶಶಿಕಾಂತ ಗುರೂಜಿ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ಬೆಳಗಾವಿಗೆ ಯಾರೂ ಆಗಮಿಸದೆ ತಮ್ಮ ತಮ್ಮ ಗ್ರಾಮಗಳಲ್ಲಿಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಅವರು ರೈತರಲ್ಲಿ ಮನವಿ ಮಾಡಿದರು.ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ ಮನವಿ ಮಾಡಿದಾಗ ಹಲವು ರೈತರು ವಾಪಸ್ ತೆರಳಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿ ನಗರಕ್ಕೆ ಆಗಮಿಸಲು ಮುಂದಾದವರನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ರೈತರು ತಾವು ಇರುವ ಸ್ಥಳಗಳಲ್ಲಿಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂದು ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದರು.
ಅಸ್ವಸ್ಥ ರೈತನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟ ಪೊಲೀಸರು:ಪೊಲೀಸರ ವಶದಲ್ಲಿದ್ದ ರೈತನೊಬ್ಬ ಮಾರ್ಗಮಧ್ಯದಲ್ಲೇ ಅಸ್ವಸ್ಥಗೊಂಡ ಘಟನೆ ವಿವಾದಕ್ಕೆ ಕಾರಣವಾಗಿದೆ. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತ, ವಾಹನದಲ್ಲಿಯೇ ಅಸ್ವಸ್ಥಗೊಂಡು ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಆದರೂ ಪೊಲೀಸರು ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬಳಿಕ ನಿರ್ಜನ ಪ್ರದೇಶದಲ್ಲಿ ಅಸ್ವಸ್ಥಗೊಂಡಿದ್ದ ರೈತನನ್ನು ಇತರ ಹೋರಾಟಗಾರರು ಹೊತ್ತುಕೊಂಡು ಬಂದು ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಅಸ್ವಸ್ಥ ರೈತನನ್ನು ಆಸ್ಪತ್ರೆಗೆ ಕರೆದೊಯ್ಯದೆ ಮಾರ್ಗಮಧ್ಯದಲ್ಲೇ ಬಿಟ್ಟು ಹೋದ ಪೊಲೀಸರ ಕ್ರಮಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.