ಉಡುಪಿ: ರಾಜ್ಯ ಸರ್ಕಾರವು ಅರಣ್ಯ ಭೂಮಿ ಒತ್ತುವರಿಯ ವಿಚಾರದಲ್ಲಿ ಶೂನ್ಯ ಸಹಿಷ್ಣುವಾಗಿದ್ದು, ಯಾವುದೇ ಕಾರಣಕ್ಕೆ ಹೊಸ ಒತ್ತುವರಿಗೆ ಅವಕಾಶ ನೀಡಬಾರದು. ಮಾತ್ರವಲ್ಲ 2015ರ ನಂತರದ ಅರಣ್ಯ ಪ್ರದೇಶದಲ್ಲಾದ ಎಲ್ಲ ಒತ್ತುವರಿಗಳನ್ನು ತಕ್ಷಣ ತೆರವು ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.ಸೋಮವಾರ ಉಡುಪಿಯಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ 2015ಕ್ಕೆ ಮೊದಲು ಒಟ್ಟು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿದೆ. ಇದರಲ್ಲಿ ಜೀವನೋಪಾಯಕ್ಕಾಗಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಕುಟುಂಬಗಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವ ತನಕ ತೆರವು ಮಾಡಬಾರದು. 3 ಎಕರೆಗಿಂತ ಹೆಚ್ಚಿನ ಒತ್ತುವರಿಯನ್ನು ತೆರವು ಮಾಡಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು. ವ್ಯವಸ್ಥಾಪನಾಧಿಕಾರಿ ನೇಮಕ: ಮಂಗಳೂರು ವೃತ್ತದಲ್ಲಿ 55 ಪ್ರಕರಣಗಳ 6144.99 ಹೆಕ್ಟೆರ್ ಪ್ರದೇಶವನ್ನು ಸೆಕ್ಷನ್ 17 ಅಂದರೆ ಅಧಿಸೂಚಿತ ಅರಣ್ಯ ಎಂದು ಘೋಷಿಸಲು ಬಾಕಿ ಇದ್ದು, ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ವ್ಯವಸ್ಥಾಪನಾಧಿಕಾರಿ ನೇಮಕ ಮಾಡಲಾಗುವುದು ಎಂದು ಸಚಿವರು ಹೇಳಿದರು. ಉಡುಪಿ ಜಿಲ್ಲೆಯಲ್ಲಿ 1224 ಸರ್ವೆ ನಂ.ಗಳಲ್ಲಿ ಪರಿಭಾವಿತ (ಡೀಮ್ಡ್) ಅರಣ್ಯವಿದ್ದು, ಇದರಲ್ಲಿ 400 ಸರ್ವೆ ನಂ.ಗಳು ಸಂಪೂರ್ಣ ಡೀಮ್ಡ್ ಆಗಿವೆ. 94 ಸರ್ವೆ ನಂ.ಗಳನ್ನು ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ಮಾಡಲಾಗಿದೆ ಎಂದು ಉಡುಪಿ ಡಿಸಿ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೂಡಲೇ ಹೆಚ್ಚುವರಿ ಭೂ ಮಾಪಕರನ್ನು ನಿಯೋಜಿಸಿ ಉಳಿದ ಸರ್ವೆ ನಂಬರ್‌ಗಳ ಸರ್ವೆಯನ್ನು ತಕ್ಷಣ ಪೂರ್ಣಗೊಳಿಸುವಂತೆ ಸೂಚಿಸಿದರು.ಸಂಘರ್ಷ ತಡೆಗೆ ಸೂಚನೆ: ಪುತ್ತೂರು, ಹೆಬ್ರಿ, ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿ, ವೇಣೂರು, ಕಾರ್ಕಳ ಮೊದಲಾದ ಕಡೆಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಶಂಕರನಾರಾಯಣ ವಲಯ ಹೆನ್ನಾಬೈಲು ಎಂಬಲ್ಲಿ ಚಿರತೆಯೊಂದನ್ನು ಕೊಂದು ಅದರ ಕಾಲುಗಳನ್ನು ಕತ್ತರಿಸಿದ್ದ ದುಷ್ಕರ್ಮಿಗಳನ್ನು ಹುಡುಕಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಅಧಿಕಾರಿ, ಸಿಬ್ಬಂದಿಯ ಸೇವೆಗೆ ಸಚಿವರು ಮೆಚ್ಚುಗೆ ಸೂಚಿಸಿದರು.
ಫಿಶ್‌ಮಿಲ್‌ಗಳ ಮೇಲೆ ಕ್ರಮ: ಪರಿಸರ ಮಾಲಿನ್ಯಕಾರಕವಾದ ಫಿಷ್ ಮಿಲ್‌ಗಳ ವಿರುದ್ಧ ಕ್ರಮ ವಹಿಸಲು ಸೂಚಿಸಿದ ಅರಣ್ಯ ಸಚಿವರು, ನದಿಗಳ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ, ಶುದ್ಧೀಕರಣ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ನಿಗಾ ಇಡುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ಸ್ವರೂಪ್ ಕೆ.ಟಿ., ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತು ಕಮಲಾ ಕರಿಕಳನ್ ಮತ್ತಿತರರು ಪಾಲ್ಗೊಂಡಿದ್ದರು.