ಸಾರಾಂಶ
ಮನೆಯ ಬಾಗಿಲಲ್ಲಿ ಇಂಗ್ಲೀಷ್ ಪತ್ರ ಬರೆದಿಟ್ಟ ಅಪರಿಚಿತರು । ಬಾಲಕನ ಕಿಡ್ನಿ ತೆಗೆಯುವುದಾಗಿ ಬೆದರಿಕೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಬೆಂಗಳೂರಿನಿಂದ ತಾಯಿಯೊಂದಿಗೆ ನಗರದ ಗರೀಬ್ ನವಾಜ್ ಕಾಲೋನಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದ 11 ವರ್ಷ ವಯಸ್ಸಿನ ಬಾಲಕನೊಬ್ಬನನ್ನು ಅಪಹರಿಸಿರುವ ಅಪಹರಣಕಾರರು ₹22 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.₹22 ಲಕ್ಷ ನೀಡದಿದ್ದರೆ ಬಾಲಕನ ಕಿಡ್ನಿ ತೆಗೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಚೆನ್ನಾಗಿರುವುದಿಲ್ಲ ಎಂದು ಹೆದರಿಸಿದ್ದಾರೆ ಎಂದು ಬಾಲಕನ ತಾಯಿ ಸೈಯದಾ ಸಮೀನಾ ಅಂಜುಮ್ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೈಯದಾ ಸಮೀನಾ ಅಂಜುಮ್ ಅವರು ಮಗಳು ಶಮಿಸ್ತಾ ಅಲುಮೀರಾ (14) ಮತ್ತು ಮಗ ಸೈಯದ್ ಮುಕ್ತಾರ್ ಹಾಶ್ಮಿ (11) ಜೊತೆ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದು, ಪತಿ ಸೈಯದ್ ಮುಜೀಬ್ ಹಾಶ್ಮಿ ಅವರು ಸೌದಿಯಲ್ಲಿದ್ದಾರೆ. ಬೆಂಗಳೂರಿನ ಜಯನಗರದ ರೇನ್ಟೀ ಶಾಲೆಯಲ್ಲಿ ಮಗ ಸೈಯದ್ ಮುಕ್ತಾರ್ ಹಾಶ್ಮಿ 6ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.ಸೈಯದಾ ಸಮೀನಾ ಅಂಜುಮ್ ಅವರು ಮಕ್ಕಳನ್ನು ಕರೆದುಕೊಂಡು ನ.4 ರಂದು ಕಲಬುರಗಿಯ ಗರೀಬ್ ನವಾಜ್ ಕಾಲೋನಿಯಲ್ಲಿರುವ ಅತ್ತೆಯ ಮನೆಗೆ ಬಂದಿದ್ದು, ನ.6 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಸೈಯದ್ ಮುಕ್ತಾರ್ ಹಾಶ್ಮಿ ಮನೆಯ ಹತ್ತಿರವಿರುವ ಮಸೀದ್‍ಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಂದಿಲ್ಲ.ನ.7ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಂಗ್ಲೀಷ್‍ನಲ್ಲಿ ಬರೆದ ಪತ್ರವನ್ನು ಅಪರಿಚಿತರು ಮನೆಯ ಬಾಗಿಲಲ್ಲಿ ಇಟ್ಟು ಹೋಗಿದ್ದು, ₹22 ಲಕ್ಷ ಹಣ ಕೊಡದಿದ್ದರೆ ನಿಮ್ಮ ಮಗನ ಕಿಡ್ನಿ ಅಥವಾ ಇನ್ನೇನಾದರು ಮಾಡುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಈ ವಿಷಯ ಪೊಲೀಸರಿಗೆ ತಿಳಿಸಿದರೆ ಚೆನ್ನಾಗಿರುವುದಿಲ್ಲ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವಿಶ್ವವಿದ್ಯಾಲಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.