ಶ್ವ ಕಿಡ್ನಿ ದಿನದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಡ್ನಿ ಕಾಯಿಲೆ ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ವಂಶಪಾರಂಪರ್ಯವಾಗಿ ಕಿಡ್ನಿ ಕಾಯಿಲೆ ಹೊಂದಿದ್ದರೆ ಅಂತವರು ತಪಾಸಣೆ ನಡೆಸಿ, ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಹೇಳಿದರು.

ಮಂಗಳೂರು: ಆರಂಭಿಕ ಹಂತದಲ್ಲೇ ಕಿಡ್ನಿ ಕಾಯಿಲೆ ಪತ್ತೆ ಹಚ್ಚಿದರೆ ಕಿಡ್ನಿ ವೈಫಲ್ಯ ಆಗುವುದನ್ನು ತಡೆಗಟ್ಟಬಹುದು ಎಂದು ಮಂಗಳೂರು ಕೆಎಂಸಿಯ ಹಿರಿಯ ನೆಫ್ರೋಲಜಿ ತಜ್ಞ ಡಾ. ಅಶೋಕ್‌ ಭಟ್‌ ಹೇಳಿದ್ದಾರೆ.

ವಿಶ್ವ ಕಿಡ್ನಿ ದಿನದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಡ್ನಿ ಕಾಯಿಲೆ ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ವಂಶಪಾರಂಪರ್ಯವಾಗಿ ಕಿಡ್ನಿ ಕಾಯಿಲೆ ಹೊಂದಿದ್ದರೆ ಅಂತವರು ತಪಾಸಣೆ ನಡೆಸಿ, ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಹೇಳಿದರು.

ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್‌ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ಅಂಗಾಂಗ ದಾನದ ಬಗ್ಗೆ ದಾನಿಗಳು ನೋಂದಣಿ ಮಾಡಿದ ಬಳಿಕ ಕುಟುಂಬಿಕರಿಗೆ ದಾನದ ವಿಷಯವನ್ನು ತಿಳಿಸಿರಬೇಕು ಎಂದರು.

ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚಿಸುವ ನೇತೃತ್ವವನ್ನು ಕೆಎಂಸಿ ಆಸ್ಪತ್ರೆಯ ನೆಫ್ರೋಲಜಿ ವಿಭಾಗ ಕೈಗೊಂಡಿದೆ. ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ಅತಿದೊಡ್ಡದಾದ ಡಯಾಲಿಸಿಸ್‌ ಘಟಕ ಹೊಂದಿದ್ದು, 24 ಗಂಟೆ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನಫ್ರೋಲಜಿಸ್ಟ್‌ಗಳನ್ನು ಹೊಂದಿದೆ ಎಂದು ಹೇಳಿದರು.

ಹಿರಿಯ ನೆಫ್ರೋಲಜಿ ತಜ್ಞ ಡಾ. ಸುಶಾಂತ್‌ ಕುಮಾರ್‌ ಮಾತನಾಡಿ, ಡಯಾಲಿಸಿಸ್‌ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್‌ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವೂ ಹೆಚ್ಚು. ಆದರೆ ಇದು ಸೂಕ್ತ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಅಂಗಾಂಗ ದಾನ ಪಡೆಯಲು ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಜೀವಂತ ದಾನಿಗಳಿಂದ ದಾನ ಪಡೆಯಲು ಕೆಎಂಸಿ ಆಸ್ಪತ್ರೆಯಲ್ಲಿ ಸಮಿತಿಯಿದ್ದು, ಅಂಗಾಂಗ ದಾನ ಆ್ಯಕ್ಟ್‌ಗೆ ಅನುಗುಣವಾಗಿ ಎಲ್ಲ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.

ನೆಫ್ರೋಲಜಿ ವಿಭಾಗದ ಎಚ್‌ಒಡಿ ಡಾ. ಮಯೂರ್‌ ಪ್ರಭು ಮಾತನಾಡಿ, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ಅಡ್ವಾನ್ಸ್ಡ್‌ ಡಯಾಲಿಸಿಸ್‌ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್‌ ಡಯಾಗೊಸ್ಟಿಕ್‌ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರೋಲಜಿ ಸೌಲಭ್ಯವನ್ನು ರೂಪಿಸಿದ್ದೇವೆ ಎಂದು ಹೇಳಿದರು.

ಕಿಡ್ನಿ ಕಸಿ ಮೂಲಕ ಕಿಡ್ನಿ ಕಾಯಿಲೆಯಿಂದ ಪಾರಾಗಬಹುದು ಎಂದು ಕೆಎಂಸಿಯಲ್ಲಿ ಕಿಡ್ನಿ ಕಸಿಗೆ ಒಳಗಾದ ವ್ಯಕ್ತಿಯೊಬ್ಬರು ಅನಿಸಿಕೆ ಹಂಚಿಕೊಂಡರು. ನನಗೆ 2010ರಲ್ಲಿ ಕಿಡ್ನಿ ಕಾಯಿಲೆ ಪತ್ತೆಯಾಯಿತು. 2020ರಿಂದ ಡಯಾಲಿಸಿಸ್‌ಗೆ ಒಳಗಾದೆ. 2025 ಫೆಬ್ರವರಿಯಲ್ಲಿ ಜೀವ ಸಾರ್ಥಕತೆ ಮೂಲಕ ಕಿಡ್ನಿ ಕಸಿ ಮಾಡಿಸಿಕೊಂಡೆ. ಈಗ ಆರೋಗ್ಯವಾಗಿದ್ದೇನೆ ಎಂದರು.

ಡಾ. ದುಷ್ಯಂತ್‌, ಪಿಆರ್‌ಒ ರಾಕೇಶ್‌ ಇದ್ದರು.