ತನ್ನ ಪತಿಯೊಂದಿಗೆ ಜೀವನ ನಡೆಸದೇ, ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮಾನವನ್ನು ಹರಾಜು ಹಾಕಿದಳು ಎಂಬ ಕಾರಣಕ್ಕೆ ಯುವತಿಯನ್ನು ಕುಟುಂಬಸ್ಥರೇ ಹತ್ಯೆ ಮಾಡಿ, ನಂತರ ಸಾಕ್ಷಿ ನಾಶಕ್ಕಾಗಿ ಆಕೆಯನ್ನು ಸುಟ್ಟುಹಾಕಿದ ಘಟನೆ 2026ರ ಮಾ.13ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಮಿರಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹೆಳವಿ (24) ಹತ್ಯೆಗೀಡಾದ ಯುವತಿ. ಹುಕ್ಕೇರಿ ತಾಲೂಕಿನ ನದಿ ಗುಡಿಕ್ಷೇತ್ರ ಗ್ರಾಮದ ಯುವತಿ ಚಿಕ್ಕಪ್ಪ ಪ್ರಕಾಶ ಹೆಳವರ, ಯುವತಿ ಸಹೋದರ ಶ್ಯಾನೂರ ಹೆಳವರ ಹಾಗೂ ಸಹೋದರಿಯ ಪತಿ, ರಾಯಬಾಗ ತಾಲೂಕಿನ ಮೊರಬದ ಕಲ್ಲಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಏನಿದು ಘಟನೆ?:

ಸತ್ಯವ್ವಳನ್ನು ಸಂತೋಷ ಹೆಳವಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಸತ್ಯವ್ವ ಪತಿಯನ್ನು ಬಿಟ್ಟು ಹುಕ್ಕೇರಿ ತಾಲೂಕಿನ ನದಿ ಗುಡಿಕ್ಷೇತ್ರದ ರಹವಾಸಿ ಕೃಷ್ಣಾ ಸಹದೇವ ಪಾಟೀಲ (28) ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ, ಆತನೊಂದಿಗೆ ಪರಾರಿಯಾಗಿದ್ದಳು. ಈ ಕುರಿತು ಕಾಣೆಯಾದ ಬಗ್ಗೆಯೂ ದೂರು ದಾಖಲಾಗಿತ್ತು. ಆದರೆ, ಇವರನ್ನು ಸತ್ಯವ್ವ ಕಡೆಯ ಕುಟುಂಬದವರು ಪತ್ತೆ ಮಾಡಿದ್ದಾರೆ. ಅವರು ಸಿಕ್ಕಿದ್ದು ಮಹಾರಾಷ್ಟ್ರದ ಮಿರಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎಂದು ಹೇಳಲಾಗುತ್ತಿದೆ. ನಂತರ ಆಕೆಯನ್ನು ಅಲ್ಲಿಯೇ ಹತ್ಯೆ ಮಾಡಿ ಶವ ಸುಟ್ಟು ಹಾಕಿದ್ದಾರೆ. ಈಗ ಪ್ರಕರಣ ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣವನ್ನು ಮಹಾರಾಷ್ಟ್ರದ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲು ಪೊಲೀಸ್‌ ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.