ಸಾರಾಂಶ
ಗಂ.ದಯಾನಂದ ಕುದೂರುಕುದೂರು: ಪಟ್ಟಣದ ಶ್ರೀರಾಮಲೀಲಾ ಮೈದಾನದಲ್ಲಿ ಹೈಟೆಕ್ ಮಾದರಿ ರೂಪಿಸಲು ಮೈದಾನದಲ್ಲಿದ್ದ ಮರಗಳ ಮಾರಣ ಹೋಮ ಆರಂಭವಾಗಿದೆ.
2 ಎಕರೆ 27 ಗುಂಟೆಯ ವಿಸ್ತೀರ್ಣದಲ್ಲಿ ಗ್ರಾಮದ ಹೃದಯಭಾಗದಲ್ಲಿರುವ ವಿಶಾಲವಾದ ಮೈದಾನದ ಸುತ್ತಲೂ ಆಲ, ಅರಳಿ, ಹತ್ತಿ, ನೇರಳೆ, ಬನ್ನಿಮರ, ಬೇವು ಹೀಗೆ ಹಲವು ಹತ್ತು ಜಾತಿಯ ಮರಗಳು ಸೊಂಪಾಗಿ ಬೆಳೆದಿವೆ. ಮೈದಾನದ ಪೂರ್ವ ದಿಕ್ಕಿನ ಐವತ್ತಕ್ಕಿಂತಲೂ ಹೆಚ್ಚಿರುವ ಮರಗಳಲ್ಲಿ ನೂರಾರು ಹಕ್ಕಿಗಳು ಹಣ್ಣು ತಿಂದು ಜೀವಿಸುತ್ತಿವೆ. ಇದರ ಕೆಳಗೆ ಗ್ರಾಮದ ಜನರು ನಿತ್ಯವೂ ವಾಯುವಿಹಾರ ನಡೆಸುತ್ತಾರೆ. ಇನ್ನು ಮೈದಾನದ ಪಶ್ಚಿಮ ದಿಕ್ಕಿನಲ್ಲಿ ಅರಳಿ, ಅಶ್ವಥ, ಬನ್ನಿ ಬೇವಿನಂತಹ ಪೂಜನೀಯ ಮರಗಳು ಬೆಳೆದು ನಿಂತಿವೆ. ಹೈಟೆಕ್ ಮೈದಾನ ನಿರ್ಮಾಣದ ಗ್ಯಾಲರಿಗೆ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿರುವ ಮರಗಳು ತೊಂದರೆಯಾಗುತ್ತಿವೆ ಎಂದು ಅವುಗಳನ್ನು ಕಡಿಯುವ ಕೆಲಸ ಆರಂಭಿಸಿದ್ದಾರೆ.ಅರಣ್ಯ ಇಲಾಖೆಯವರ ಹರಾಜು ಪಡೆದ ಗುತ್ತಿಗೆದಾರ ಮರ ಕಡೆಯಲು ಬಂದಾಗ ಗ್ರಾಮದ ನಾಗರಿಕರು ವಿರೋಧಿಸಿದ್ದಾರೆ. ಗ್ರಾಪಂ ಸದಸ್ಯ ಬಾಲಕೃಷ್ಣ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಮೈದಾನಕ್ಕೆ ಇನ್ನೂ ಹಣ ಮಂಜೂರು ಆಗಿಲ್ಲ. ಆಗಲೇ ಮರಗಳನ್ನು ಕಡಿಯುತ್ತಿದ್ದೀರಿ. ಹೀಗೆ ಒಂದೊಂದನ್ನೇ ನಾಶ ಮಾಡಿಕೊಂಡು ಹೋದರೆ ಪರಿಸರವನ್ನು ಕಾಪಾಡುವವರು ಯಾರು? ಎಂದು ಗದರಿಕೊಂಡಿದ್ದಾರೆ. ಅಷ್ಟರ ವೇಳೆಗೆ ಪೋಲೀಸ್ ಇನ್ಸ್‌ಫೆಕ್ಟರ್ ಮೈದಾನಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಮೈದಾನ ನಿರ್ಮಾಣಕ್ಕೆ ಮರ ಕಡಿಯಲು ಪಂಚಾಯಿತಿ ಸದಸ್ಯರೇ ಒಪ್ಪಿಗೆ ನೀಡಿ, ಈಗ ಗಲಾಟೆ ಮಾಡುವುದು ಸರಿಯಲ್ಲಿ ಎಂದು ಮನವರಿಕೆ ಮಾಡಿದ ನಂತರ ಪ್ರತಿಭಟನೆ ನಿಂತಿತೇ ಹೊರತು, ಮರ ಕಡಿಯುವುದು ನಿಲ್ಲಲೇ ಇಲ್ಲ.ಹೈಟೆಕ್ ಮೈದಾನ ನಿರ್ಮಾಣ ಮಾಡಲು ನೀಲನಕ್ಷೆ ತಯಾರಾದಾಗ ಮರಗಳನ್ನು ಕಡಿಯಲೇಬೇಕೆಂದಿತ್ತು. ಇದರ ಕುರಿತಾಗಿ ಶಾಸಕ ಎಚ್.ಸಿ.ಬಾಲಕೃಷ್ಣಗೆ ಮನವಿ ಮಾಡಿ ಮರಗಳನ್ನು ಉಳಿಸಿಕೊಂಡು ಮೈದಾನ ನಿರ್ಮಾಣ ಮಾಡುವಂತಹ ನೀಲನಕ್ಷೆ ತಯಾರು ಮಾಡಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಅವರು ಕೂಡಾ ಸಂಬಂಧಪಟ್ಟ ಎಂಜಿನಿಯರ್‌ಗೆ ತಿಳಿಸಿದ್ದರು. ಆದರೆ ಆತ ಬದಲಾವಣೆ ಮಾಡದೆ ಹಳೆಯ ನೀಲನಕ್ಷೆಯನ್ನೇ ಮಂಜೂರು ಮಾಡುವಂತೆ ಮಾಡಿ ಮೈದಾನದಲ್ಲಿ ಗ್ಯಾಲರಿ ನಿರ್ಮಾಣಕ್ಕೆ ಮರ ಕಡಿಯಲೇಬೇಕು ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದ್ದಾರೆ.
ವಿಜಯದಶಮಿ ಸಂದರ್ಭದಲ್ಲಿ ಆಲ ಅರಳಿ, ಅಶ್ವಥ್ಥ, ಬನ್ನಿ ಮರಗಳನ್ನು ಪೂಜಿಸುವ ಸಂಪ್ರದಾಯವಿದೆ. ಆದರೆ ಈ ಹಬ್ಬದ ಹೊಸಿಲಿನಲ್ಲಿ ಇರುವಾಗಲೇ ಪೂಜೆಗೆ ಸಲ್ಲಬೇಕಾದ ಮರ ಕಡಿಯುತ್ತಿರುವುದು ಗ್ರಾಮಕ್ಕೆ ಶುಭಸೂಚಕವಲ್ಲ. ಒಂದೆಡೆ ನೀರು ತುಂಬಿದ್ದ ಕರೆಯೊಡೆದು ಡಿಪೋ ನಿರ್ಮಾಣ ಮಾಡುತ್ತಿದ್ದಾರೆ, ಮತ್ತೊಂದೆಡೆ ಪೂಜೆ ಮಾಡುತ್ತಿದ್ದ ಮರ ಕಡಿಯುತ್ತಿದ್ದಾರೆ. ಇವರ ನಿರ್ಧಾರ ಗ್ರಾಮದ ಅಭಿವೃದ್ದಿಗೆ ಶುಭ ಸೂಚಕವಲ್ಲ. ಕೆ.ಆರ್.ಯತಿರಾಜ್, ಮಾಜಿ ಅಧ್ಯಕ್ಷ ತಾಪಂಹೈಟೆಕ್ ಮೈದಾನ ನಿರ್ಮಾಣಕ್ಕೆ ಮರ ಕಡಿಯುವುದು ಅನಿವಾರ್ಯ ಎಂದು ಸಂಬಂಧಪಟ್ಟ ಎಂಜಿನಿಯರ್ ಪಂಚಾಯಿತಿ ಗಮನಕ್ಕೆ ತಂದು ಮರ ತೆರವು ಮಾಡಿಕೊಡಲು ಅನುಮತಿ ಕೇಳಿದ್ದರು. ಸಭೆಯಲ್ಲಿ ಮರಕಡಿಯಲು ಬಹುಮತ ಸಿಕ್ಕ ಕಾರಣ ಒಪ್ಪಿಗೆ ನೀಡಲಾಯಿತು. ಆದರೆ ಮೈದಾನದ ಪಶ್ಚಿಮ, ದಕ್ಷಿಣ ದಿಕ್ಕಿನಲ್ಲಿರುವ ಮರ ಮಾತ್ರ ಕಡಿಯಬೇಕು ಎಂದು ತಿಳಿಸಲಾಗಿದೆ.- ಪರುಷೋತ್ತಮ್ ಪಿಡಿಒ ಕುದೂರು ಗ್ರಾಪಂ