ಸಾರಾಂಶ
ಹೊಸ ಕಟ್ಟಡ ನಿರ್ಮಾಣದ ನೆಪದಲ್ಲಿ ಮರಗಳ ಮಾರಣ ಹೋಮ ನಡೆದಿದ್ದು ಪಟ್ಟಣದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬ್ಯಾಡಗಿ: ಹೊಸ ಕಟ್ಟಡ ನಿರ್ಮಾಣದ ನೆಪದಲ್ಲಿ ಮರಗಳ ಮಾರಣ ಹೋಮ ನಡೆದಿದ್ದು ಪಟ್ಟಣದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಆದರೆ ಕಟ್ಟಡದ ಸುತ್ತಮುತ್ತ ಹಲವು ವರ್ಷಗಳಿಂದ ಬೆಳೆಸಲಾಗಿದ್ದ ವಿವಿಧ ರೀತಿಯ ಮರಗಳಿದ್ದು ಯಾರೊಬ್ಬರ ಗಮನಕ್ಕೂ ತಾರದೇ ಕಡಿದು ಹಾಕಲಾಗಿದ್ದನ್ನು ಸಮಿತಿ ಖಂಡಿಸಿದೆ.ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಪರಿಸರ ಸ್ನೇಹಿ ತಂಡದ ಗಂಗಣ್ಣ ಎಲಿ ಪಟ್ಟಣದಲ್ಲಿ ಮರಗಳನ್ನು ಬೆಳೆಸುವ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಆದರೆ ಮರಗಳ ಮಾರಣ ಹೋಮ ಮಾತ್ರ ಹೆಚ್ಚಾಗುತ್ತಿದೆ, ಅರಣ್ಯ ಇಲಾಖೆ ಪಕ್ಕದಲ್ಲಿಯೇ ಮರಗಳನ್ನು ಕತ್ತರಿಸುತ್ತಿದ್ದರೂ ಸಹ ಅಧಿಕಾರಿಗಳು ಪಕ್ಕದಲ್ಲೇ ಇದ್ದರೂ ಇದನ್ನ ತಡೆಯಲು ವಿಫಲರಾಗಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯತೆ ಪಡೆದ ಸಮಿತಿ: ಪರಿಸರ ಸ್ನೇಹಿ ತಂಡದ ಅಧ್ಯಕ್ಷ ರಾಜಶೇಖರ ಹುಲ್ಲತ್ತಿ ಮಾತನಾಡಿ, ಕಳೆದ ಹಲವು ವರ್ಷಗಳ ಹಿಂದೆ ಮರಗಳ ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳನ್ನ ಒಳಗೊಂಡಂತೆ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಪುರಸಭೆ ಬ್ಯಾಡಗಿ ರಚನೆ ಮಾಡಲಾಗಿತ್ತು, ಈ ಸಮಿತಿ ಶ್ರಮದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೂರಾರು ಮರಗಳನ್ನು ಉಳಿಸಲಾಗಿದೆ, ಇದರೊಟ್ಟಿಗೆ ಪಟ್ಟಣದ ಸುತ್ತಮುತ್ತ ಯಾರೇ ಆಗಿರಲಿ ಯಾವುದೇ ಮರಗಳನ್ನ ಕತ್ತರಿಸಬೇಕಾದರೂ ಸಮಿತಿಯ ಅನುಮತಿ ಪಡೆಯಬೇಕಿದೆ, ಆದರೆ ಅತ್ಯಂತ ಅವಶ್ಯವಿದ್ದಲ್ಲಿ ಮಾತ್ರ ಚರ್ಚಿಸಿ ಸಮಿತಿ ತಿರ್ಮಾನ ತೆಗೆದುಕೊಳ್ಳುತ್ತದೆ, ಆದರೆ ಕಟ್ಟಡದ ನಿರ್ಮಾಣ ಮಾಡುವ ಗುತ್ತಿಗೆದಾರ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ ಇದನ್ನ ಸಮಿತಿ ಖಂಡಿಸುತ್ತದೆ ಎಂದರು.ಕಾನೂನು ಕ್ರಮಕ್ಕೆ ಆಗ್ರಹ: ಅನಧಿಕೃತವಾಗಿ ಮರಗಳನ್ನು ಕಡಿದು ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿರುವ ಸಂಬಂಧಿಸಿದ ಇಲಾಖೆಗಳು ಇದಕ್ಕೆ ಪೂರಕವಾದ ದಾಖಲೆಗಳನ್ನು ನೀಡಬೇಕು, ಇಲ್ಲದೇ ಹೋದಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಅಗ್ರಹಿಸಿದರು.