ವೈದ್ಯ ವಿದ್ಯಾರ್ಥಿ ಅಕಾಲಿಕ ಸಾವಿಗೆ ಮರುಗಿದ ಕಿಮ್ಸ್‌

| Published : May 05 2024, 02:06 AM IST

ವೈದ್ಯ ವಿದ್ಯಾರ್ಥಿ ಅಕಾಲಿಕ ಸಾವಿಗೆ ಮರುಗಿದ ಕಿಮ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ದಿನಗಳಿಂದ ಅನಾರೋಗ್ಯ ಎಂದು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗೆ ಕ್ಷಣ ಕ್ಷಣಕ್ಕೂ ದೇಹದಲ್ಲಿ ವಿಚಿತ್ರ ಬದಲಾವಣೆಗಳು ಕಾಣಿಸಿಕೊಂಡು ಚಿಕಿತ್ಸೆಗ ಸ್ಪಂದಿಸಲಿಲ್ಲ. ಹೀಗಾಗಿ ಎಸ್‌ಡಿಎಂ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಕ್ರಿಟಿಕಲ್ ಮೆಡಿಸಿನ್ ಕೇರ್ ವಿಶೇಷ ವಿಭಾಗಕ್ಕೆ ಸೇರಿಸಲಾಗಿತ್ತು.

ಹುಬ್ಬಳ್ಳಿ:

ಯಾವುದೋ ಕಾರಣಕ್ಕಾಗಿ ದೇಹದಲ್ಲಿ ವ್ಯಾಪಕವಾಗಿ ನಂಜು ಹರಿಡಿದ ಪರಿಣಾಮ ಚಿಕಿತ್ಸೆ ಫಲಿಸದೇ ವೈದ್ಯ ವಿದ್ಯಾರ್ಥಿ ಅಕಾಲಿಕವಾಗಿ ಮೃತಪಟ್ಟ ಘಟನೆ ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಜರುಗಿದೆ.ಇಲ್ಲಿನ ಕಿಮ್ಸ್‌ನ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಮೊದಲ ವರ್ಷದಲ್ಲಿ ಓದುತ್ತಿದ್ದ ಶ್ರೀಶೈಲ ಬಾಲಗುಂಡ (೨೬) ಮೃತಪಟ್ಟಿದ್ದಾರೆ. ಇವರು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದವರು.

ನಾಲ್ಕು ದಿನಗಳಿಂದ ಅನಾರೋಗ್ಯ ಎಂದು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗೆ ಕ್ಷಣ ಕ್ಷಣಕ್ಕೂ ದೇಹದಲ್ಲಿ ವಿಚಿತ್ರ ಬದಲಾವಣೆಗಳು ಕಾಣಿಸಿಕೊಂಡು ಚಿಕಿತ್ಸೆಗ ಸ್ಪಂದಿಸಲಿಲ್ಲ. ಹೀಗಾಗಿ ಎಸ್‌ಡಿಎಂ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಕ್ರಿಟಿಕಲ್ ಮೆಡಿಸಿನ್ ಕೇರ್ ವಿಶೇಷ ವಿಭಾಗಕ್ಕೆ ಸೇರಿಸಲಾಗಿತ್ತು. ಕಿಮ್ಸ್‌ ಮತ್ತು ಎಸ್‌ಡಿಎಂನ ಎಲ್ಲ ವಿಭಾಗದ ವೈದ್ಯರು ನಡೆಸಿದ ಪ್ರಯತ್ನ ಫಲಿಸಲಿಲ್ಲ. ಶುಕ್ರವಾರ ಮಧ್ಯಾಹ್ನ ವೇಳೆಗೆ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಗೆ ‘ಎಂಟ್ರೋ ಇನ್ವೆಸ್ ಎರೊಲೆಸ್’ ಎಂಬ ನಂಜು ಕಾಯಿಲೆ ಇರಬಹುದು ಎಂದು ಶಂಕಿಸಲಾಗಿದೆ. ಇದು ಬಹಳ ವಿರಳವಾದ ಕಾಯಿಲೆಯಾಗಿದ್ದು, ಈ ಕಾಯಿಲೆ ಇರುವ ಬಗ್ಗೆ ವಿದ್ಯಾರ್ಥಿಗೂ ಗೊತ್ತಾಗಿಲ್ಲ. ಹಠಾತ್ ಆಗಿ ದೇಹದಲ್ಲಾದ ಬದಲಾವಣೆಗಳಿಂದ ಅಸ್ವಸ್ಥಗೊಂಡಿದ್ದನು. ಎರಡು ದಿನಗಳಲ್ಲೇ ನಂಜು ಪ್ರತಿ ಅಂಗಾಂಗಗಳಿಗೆ ವ್ಯಾಪಿಸಿ ದೇಹದಲ್ಲಿ ರಕ್ರಸ್ರಾವವಾಗಿತ್ತು ಹಾಗೂ ಎಲ್ಲ ಅಂಗಾಂಗಗಳು ನಿಷ್ಕ್ರಿಯಗೊಳಿಸಿದ್ದರಿಂದ ಆತನ ಸಾವಾಗಿದೆ ಎಂದು ಜನರಲ್ ಮೆಡಿಸಿನ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.

ಈ ತರಹದ ಕಾಯಿಲೆ ವೃತ್ತಿ ಜೀವನದಲ್ಲಿಯೇ ನೋಡಿಲ್ಲ. ಈ ಕಾಯಿಲೆಯ ಚಿಕಿತ್ಸೆ ಅತ್ಯಂತ ಸವಾಲಿನಿಂದಾಗಿತ್ತು ಎಂದು ಹಿರಿಯ ವೈದ್ಯ ಡಾ.ಕೆ.ಎಫ್. ಕಮ್ಮಾರ ಹೇಳಿದರು.

ವೈದ್ಯರ ಮಾನವೀಯತೆ

ವೈದ್ಯ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಕಿಮ್ಸ್ ವೈದ್ಯರು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಂದೆ-ತಾಯಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿದ್ಯಾರ್ಥಿ ಅಕಾಲಿಕ ಸಾವಿಗೆ ಇಡೀ ಕಿಮ್ಸ್‌ ವೈದ್ಯರು ಮಮ್ಮಲ ಮರುಗಿದ್ದಾರೆ..