ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಡಿ.ದೇವರಾಜ ಅರಸು 110ನೇ ಜನ್ಮದಿನಾಚರಣೆ ಹಾಗೂ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕಾರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ, ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಅರಸು ಶ್ರಮಿಸಿದ್ದರು ಎಂದರು.ದೇವರಾಜ ಅರಸು ಅವರು 8 ವರ್ಷ ಮುಖ್ಯಮಂತ್ರಿ ಆಗಿದ್ದರು. ಅವರ ನಂತರ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿರುವುದು ನಾನೇ. ಈ ವಿಚಾರದಲ್ಲಿ ಸಾಮ್ಯತೆ ಇದೆ. ಎಲ್ಲಾ ಹಿಂದುಳಿದ ಸಮುದಾಯಗಳಿಗೂ ರಾಜಕೀಯ ಅವಕಾಶಗಳು, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವ ಅಚಲ ನಿಲುವು ಹೊಂದಿದ್ದರು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಪಂಚ ಗ್ಯಾರಂಟಿಗಳಿಂದ ಆರ್ಥಿಕ ಸ್ಥಿತಿ ಹಾಳಾಗುತ್ತವೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ, ಅಶಕ್ತರಿಗೆ, ಬಡವರಿಗೆ ಕೊಳ್ಳುವ ಶಕ್ತಿ ನೀಡುವ ಐದು ಗ್ಯಾರಂಟಿಗಳು ಬಡವರ ಸಬಲೀಕರಣ ಮಾಡುತ್ತಿವೆ. ಅನ್ನಕ್ಕಾಗಿ ಬಡವರು ಕೈಯೊಡ್ಡಬಾರದೆಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ದೇಶದಲ್ಲೇ ಗರಿಷ್ಠ ಜಿಡಿಪಿ ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಿದೆ. 2013-14 ರಲ್ಲಿ ರಾಜ್ಯದ ತಲಾದಾಯ 1,04,000 ರು. ಇತ್ತು. 2024-25 ರಲ್ಲಿ 2,05,000 ರು. ಆಗಿದೆ. ಇದಕ್ಕೆ ಗ್ಯಾರಂಟಿಗಳ ಕೊಡುಗೆ ಇದೆ. ಹಾಗಾದರೆ ಇವು ಅಭಿವೃದ್ಧಿ ಯೋಜನೆಗಳು ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜಾತಿ ವ್ಯವಸ್ಥೆಗೆ ನೀರೆರೆಯುವ ಸಾಮಾಜಿಕ ಪಟ್ಟಭದ್ರ ಹಿತಾಸಕ್ತರು ಸಮಾಜದಲ್ಲಿದ್ದಾರೆ. ಇದು ಬದಲಾಗಲು ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳು ಹಾಗೂ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರಬೇಕು. ಇದು ಬಾರದೇ ಜಾತಿ, ವರ್ಗ ವ್ಯವಸ್ಥೆ ಹೋಗುವುದಿಲ್ಲ. ಅರಸು ಅವರು ದಲಿತರು, ಬಡವರು, ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ಉಳುವವನೇ ಭೂಮಿ ಒಡೆಯ, ಹಾವನೂರು ಆಯೋಗ ರಚಿಸಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ, ವಿಧಾನಸೌಧ ಕೆಲವೇ ಜನರ ಪ್ರಾತಿನಿಧಿಕ ಸಭೆಯಾಗಿರುವುದನ್ನು ಮನಗಂಡು ಹಿಂದುಳಿದವರೂ ವಿಧಾನಸೌದದ ಮೆಟ್ಟಿಲನ್ನು ಹತ್ತುವಂತೆ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.ಇದೇ ವೇಳೆ ಸಮಾಜವಾದಿ ಹಿನ್ನೆಲೆಯ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಗ್ಯಾರಂಟಿ ಯೋಜನೆಗಳ ರಾಜ್ಯ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ರಿಜ್ವಾನ್ ಅರ್ಷದ್, ವಿಜಯಾನಂದ ಕಾಶಪ್ಪನವರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.