ಸಾರಾಂಶ
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಕೀರನಕಲ್ಲುಗುಡ್ಡೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ನಿಗಮದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕರ್ನಾಟಕ ಯುವ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿ ಭಷ್ಟಾಚಾರ ತಾಂಡವವಾಡುತ್ತಿದೆ. ಹಿರಿಯ ಅಧಿಕಾರಿಗಳಿಂದ ಹಿಡಿದು ಕಿರಿಯ ಅಧಿಕಾರಿಗಳ ತನಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.ಕೀರನಕಲ್ಲುಗುಡ್ಡೆ ಗ್ರಾಮದಲ್ಲಿ ೨೦೨೩- ೨೪ನೇ ಸಾಲಿಗೆ ಸಂಬಂಧಿಸಿದ್ದಂತೆ ಸಿಸಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಅಂದಾಜು ವೆಚ್ಚ ೭೦ ಲಕ್ಷವಾಗಿದ್ದು, ಟೆಂಡರ್ ಮೊತ್ತ ೬೧.೬೪ ಲಕ್ಷ ವಾಗಿದೆ. ವಿಭೂತಿಕೆರೆ ಪಂಚಾಯಿತಿಗೆ ಸಂಬಂಧಿಸಿದ್ದಂತೆ ಅಂಜನಾಪುರ ಗ್ರಾಮದ ಸರಕಾರಿ ಶಾಲೆಯಿಂದ ಗ್ರಾಮದ ಬೃಹತ್ ಮೋರಿಯ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ೯೯.೯೯ ಲಕ್ಷ ವೆಚ್ಚ ಮಾಡಲಾಗಿತ್ತು. ಈ ಕಾಮಗಾರಿಯು ಸಹ ಕಳಪೆಯಿಂದ ಕೂಡಿದೆ ಎಂದರು. ಕಾಮಗಾರಿಗೆ ಸಂಬಂಧಿಸಿದ್ದಂತೆ ಅಧಿಕಾರಿಗಳನ್ನು ಅಮಾನತು ಪಡಿಸಿ ತನಿಖೆ ಮಾಡಬೇಕು. ಜತೆಗೆ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಗೋವಿಂದಪ್ಪ, ಚಿಕ್ಕಲಕ್ಷಮ್ಮ, ಹರೀಶ್, ಗೌರಮ್ಮ, ಸೌಮ್ಯ, ಮಂಜುಳಾ ಇತರರಿದ್ದರು.