ಕನ್ನಡಪ್ರಭವಾರ್ತೆ ತಿಪಟೂರು

ಪ್ರಸಕ್ತ ಸಾಲಿನ ವಿಟಿಯು ಅಂತರ್‌ ಮಹಾವಿದ್ಯಾಲಯದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೭ನೇ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕಲ್ಪತರು ನಾಡು ತಿಪಟೂರಿನ ಪ್ರಸಿದ್ದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಆತಿಥ ವಹಿಸಲಿದ್ದು ಸಾವಿರಾರು ಕ್ರೀಡಾಪಟುಗಳೊಂದಿಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಅಂತರ ಮಹಾವಿದ್ಯಾಲಯ ಕ್ರೀಡಾಕೂಟಕ್ಕೆ ಮಾ.೨೬ರಂದು ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ ಎಂದು ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ತಿಳಿಸಿದರು.

ನಗರದ ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ೨೬ ರಿಂದ ೨೯ ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಕ್ರೀಡಾಕಲ್ಪ-೨.೦ ಅಂತರ್‌ವಿಟಿಯು ಕ್ರೀಡಾಕೂಟವು ರಾಜ್ಯದ ಕ್ರೀಡಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸಲು ನಮ್ಮ ಕಲ್ಪತರು ವಿದ್ಯಾಸಂಸ್ಥೆ ಸಂಪೂರ್ಣ ಸಜ್ಜಾಗಿದ್ದು, ಭಾಗವಹಿಸುವ ವಿದ್ಯಾರ್ಥಿ ಕ್ರೀಡಾಪ್ರತಿಭೆಗಳ ಪ್ರದರ್ಶನಕ್ಕೆ ಈ ಕ್ರೀಡಾಕೂಟ ಮಹತ್ವದ ವೇದಿಕೆಯಾಗಲಿದೆ ಎಂದರು. ಕೆವಿಎಸ್ ಸಂಸ್ಥೆಯ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ,ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು ಹಾಜರಿದ್ದು ಕ್ರೀಡಾಪಟುಗಳನ್ನು ಉತ್ತೇಜಿಸಲಿದ್ದಾರೆ. ಪ್ರತಿದಿನ ಸಂಜೆ ನಡೆಯುವ ಮನೋರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರನಟ ವಿನಯ್ ರಾಜ್‌ಕುಮಾರ್ ಭಾಗವಹಿಸುವುದು ವಿಶೇಷ ಎಂದರು. ೨೬ ಮಧ್ಯಾಹ್ನ ೩ ಗಂಟೆಗೆ ನಗರದ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ಭವ್ಯ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಕ್ರೀಡಾಪಟುಗಳು, ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ೪ಗಂಟೆಗೆ ಕೇಂದ್ರ ಸಚಿವ ಸೋಮಣ್ಣ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೆರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ.ಷಡಕ್ಷರಿ, ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆ ಆಯುಕ್ತ ಆರ್. ಚೇತನ್, ಉಪವಿಭಾಗಾಧಿಕಾರಿ ಸಪ್ತಶ್ರೀ. ಬಿ.ಕೆ., ವಿಟಿಯು ಕುಲಪತಿ ಡಾ. ವಿದ್ಯಾಶಂಕರ್, ವಿಟಿಯು ಅಕಾಡೆಮಿಕ್ ಸೆನೆಟ್ ಮೆಂಬರ್ ಡಾ.ಎಚ್.ಬಿ. ಬಾಲಕೃಷ್ಣ, ಏಕಲವ್ಯ ಪ್ರಶಸ್ತಿ ವಿಜೇತ ಅಂತರರಾಷ್ಟ್ರೀಯ ಕ್ರೀಡಾಪಟು ವಿ.ನಿಹಾಲ್‌ಜೋಯಲ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ೨೯ರಂದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ವಿಟಿಯು ಕುಲಸಚಿವ ಡಾ. ಪ್ರಸಾದ್ ಬಿ.ರಾಮಾಪುರೆ, ಹಣಕಾಸು ಅಧಿಕಾರಿ ಡಾ. ಪ್ರಶಾಂತ್ ನಾಯಕ್ ಹಾಗೂ ತಹಸೀಲ್ದಾರ್ ಮೋಹನ್ ಕುಮಾರ್ ಉಪಸ್ಥಿತರಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ವಿಟಿಯು ಬೆಳ್ಳಿಪದಕ ನೀಡಲಿದೆ. ಬಾಕ್ಸ್ : ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಸಾಲಿನಲ್ಲಿ ಹೆಸರು ಪಡೆದಿರುವ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕಡೆಗಳ ೨೦೦ಕ್ಕೂ ಹೆಚ್ಚು ಕಾಲೇಜುಗಳಿಂದ ೨೫೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ೩೦೦ ಕೋಚ್‌ಗಳು ಆಗಮಿಸಲಿದ್ದಾರೆ. ರಾತ್ರಿ ೮ ಗಂಟೆವರೆಗೂ ಫ್ಲೆಡ್‌ಲೈಟ್ ಕ್ರೀಡಾಕೂಟಗಳು ನಡೆಯಲಿವೆ. ಕ್ರೀಡಾಂಗಣವನ್ನು ಅತ್ಯಂತ ಗುಣಮಟ್ಟದಲ್ಲಿ ಕಾಪಾಡಲಾಗಿದೆ. ಪ್ರತಿದಿನ ಆಗಮಿಸುವ ಎಲ್ಲರಿಗೂ ಉತ್ತಮ ಗುಣಮಟ್ಟದ ತಿಂಡಿ-ಊಟ ಹಾಗೂ ವಿವಿಧ ಪಾನೀಯಗಳ ವ್ಯವಸ್ಥೆ ಜೊತೆ ಉತ್ತಮ ವಾಸ್ತವ್ಯ ಸೌಲಭ್ಯ ಮಾಡಲಾಗಿದೆ. ಶಾಂತಿ ಹಾಗೂ ಶಿಸ್ತುಬದ್ದವಾಗಿ ಕ್ರೀಡೆಗಳು ನಡೆಯಲು ಬಿಗಿಭದ್ರತೆ ವ್ಯವಸ್ಥೆ ಇದೆ. ಈ ಕ್ರೀಡಾಕೂಟದ ಯಶಸ್ಸಿಗೆ ಸಂಸ್ಥೆಯಿಂದ ಸುಮಾರು ೬೦೦ ಕ್ಕೂಹೆಚ್ಚು ಜನರನ್ನು ಹೊಂದಿರುವ ೨೫ ವಿವಿಧ ಕಮಿಟಿಗಳನ್ನು ರಚಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಬಾಗೇಪಲ್ಲಿ ನಟರಾಜು, ಟಿ.ಎಸ್.ಬಸವರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್. ಸಂಗಮೇಶ್, ಟಿ.ಯು. ಜಗದೀಶಮೂರ್ತಿ ಮತ್ತು ಎಚ್.ಜಿ. ಸುಧಾಕರ್, ಪ್ರಾಂಶುಪಾಲ ಡಾ. ಹೆಚ್.ಸಿ.ಸತೀಶ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್.ಜಯಂತ್ ಸೇರಿದಂತೆ ಕಾಲೇಜಿನ ಹಿರಿಯ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.