ಇಂದಿನಿಂದ ಬೆಂಗಳೂರಲ್ಲಿ ಕೈಟ್‌ ಎಕ್ಸ್‌ಪೋ: ಎಚ್‌.ಕೆ. ಪಾಟೀಲ

| Published : Feb 26 2025, 01:01 AM IST

ಇಂದಿನಿಂದ ಬೆಂಗಳೂರಲ್ಲಿ ಕೈಟ್‌ ಎಕ್ಸ್‌ಪೋ: ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ನಡೆಯಲಿರುವ ಎಕ್ಸ್‌ಪೋ ಸಮಾರಂಭವನ್ನು ಫೆ. 26ರಂದು ಸಂಜೆ 6ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಹುಬ್ಬಳ್ಳಿ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದಲ್ಲಿ ಬೆಂಗಳೂರಲ್ಲಿ ಫೆ. 26ರಿಂದ 28ರ ವರೆಗೆ 3 ದಿನಗಳ ಕರ್ನಾಟಕ ಅಂತಾರಾಷ್ಟ್ರೀಯ ಟ್ರಾವೆಲ್‌ ಎಕ್ಸ್‌ಪೋ (ಕೈಟ್‌) ಏರ್ಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ನಡೆಯಲಿರುವ ಎಕ್ಸ್‌ಪೋ ಸಮಾರಂಭವನ್ನು ಫೆ. 26ರಂದು ಸಂಜೆ 6ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ಸರಕಾರ ವಿವಿಧ ಇಲಾಖೆ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಫೆ. 27 ಹಾಗೂ 28ರಂದು ಬೆಂಗಳೂರಿನ ತುಮಕೂರ ರಸ್ತೆಯ ಬೆಂಗಳೂರಿನ ಅಂತಾರಾಷ್ಟ್ರೀಯ ಎಕ್ಸಿಬಿಷನ್‌ ಸೆಂಟರ್‌ (ಬಿಐಇಸಿ) ನಲ್ಲಿ ಬಿ2ಬಿ (ಬಿಜಿನೆಸ್‌ ಟು ಬಿಜಿನೆಸ್‌) ಸಮಾವೇಶ ಜರುಗಲಿದೆ. ಪ್ರವಾಸೋದ್ಯಮ ಎಲ್ಲ ಭಾಗಿದಾರರ ಒಂದೇ ಸೂರಿನಡಿ ಸೇರಿಸುವ ಉದ್ದೇಶ ಹೊಂದಲಾಗಿದೆ. ಹೋಟೆಲ್‌, ಟ್ರಾವೆಲ್‌, ಹೋಂ ಸ್ಟೇ, ಕೃಷಿ ಪ್ರವಾಸೋದ್ಯಮ ಪ್ರವರ್ತಕರು, ಮಾರ್ಗದರ್ಶಿಗಳು, ಮಹಿಳಾ ಉದ್ಯಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಏಜೆನ್ಸಿಗಳು, ಹೋಂ ಸ್ಟೇ ಮಾಲೀಕರು, ಕೃಷಿ ಪ್ರವಾಸೋದ್ಯಮ ವರ್ತಕರು, ಪ್ರವಾಸಿ ಮಾರ್ಗದರ್ಶಿಗಳು, ಮಹಿಳಾ ಉದ್ಯಮಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೈಟ್‌ ಸಮಾವೇಶದಲ್ಲಿ ಭಾಗವಹಿಸಲು ದೇಶಿ- ವಿದೇಶಿ ಖರೀದಾರರನ್ನು ಆಯ್ಕೆ ಮಾಡಲಾಗಿದ್ದು, 36 ದೇಶಗಳ 300 ಜನರ ಸಂದರ್ಶನ ನಡೆಸಿ, ಅದರಲ್ಲಿ 110ಕ್ಕೂ ಹೆಚ್ಚು ವಿದೇಶಿ ಖರೀದಿದಾರರು, ಏಜೆಂಟರ್‌ನ್ನು ಆಯ್ಕೆ ಮಾಡಲಾಗಿದೆ. ಅದರಂತೆ 15ಕ್ಕೂ ಹೆಚ್ಚು ವಿದೇಶಿ ಟ್ರಾವೆಲ್‌ ಮಾಧ್ಯಮದವರನ್ನು ಆಯ್ಕೆ ಮಾಡಲಾಗಿದೆ. 858ಕ್ಕೂ ಹೆಚ್ಚು ದೇಶಿ ಖರೀದಿದಾರರ ಸಂದರ್ಶನ ನಡೆಸಿ, 235ಕ್ಕೂ ಹೆಚ್ಚು ದೇಶಿ ಖರೀದಿದಾರರನ್ನು ಹಾಗೂ 20ಕ್ಕೂ ಹೆಚ್ಚು ದೇಶಿ ಟ್ರಾವೆಲ್‌ ಮಾಧ್ಯಮದವರ ಆಯ್ಕೆ ಮಾಡಲಾಗಿದೆ. ಆ ಮೂಲಕ ಕೈಟ್‌ನಲ್ಲಿ ಖರೀದಿಗಾರರು ಮತ್ತು ಮಾರಾಟಗಾರರ ನಡುವೆ ಸಂಪರ್ಕ ಸೇತುವೆಯಾಗಿ ಪ್ರವಾಸೋದ್ಯಮ ಇಲಾಖೆ ಕೆಲಸ ಮಾಡಲಿದೆ ಎಂದರು.

ಖರೀದಿಗಾರರು ಹಾಗೂ ಮಾರಾಟಗಾರರ ನಡುವೆ 3 ದಿನಗಳಲ್ಲಿ 16 ಬಿಜಿನೆಸ್‌ ಸಭೆಗಳು ನಡೆಯಲಿವೆ. ರಾಜ್ಯದ ಶ್ರೀಮಂತ ಕಲೆ, ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಸಮಾರಂಭ, ಆಹಾರ ಶೈಲಿಯ ಪರಿಚಯ, ನೆಟ್‌ವರ್ಕಿಂಗ್‌ ಸಭೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕೈಟ್‌ನಲ್ಲಿ ಪಾಲ್ಗೊಳ್ಳುವ ವಿದೇಶಿ ಏಜೆಂಟ್‌ಗಳಿಗೆ ಕಡ್ಡಾಯವಾಗಿ 5 ದಿನಗಳ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, 30 ಜನರ 5 ತಂಡಗಳನ್ನು ವಿಂಗಡಿಸಿ ಪ್ರವಾಸ ಮಾಡಿಸಲಾಗುತ್ತಿದೆ. ಈಗಾಗಲೇ 56ಕ್ಕೂ ಹೆಚ್ಚು ವಿದೇಶಿ ಏಜೆಂಟರು ಬಂದಿದ್ದು, ಪ್ರವಾಸ ಕೂಡ ಕೈಗೊಂಡಿದ್ದಾರೆ ಎಂದರು.

ರಾಜ್ಯದ 150ಕ್ಕೂ ಹೆಚ್ಚು ಭಾಗಿದಾರರು ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಎಲ್ಲರಿಗೂ ತಮ್ಮ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕಾಗಿ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ದೇಶಿ ಹಾಗೂ ವಿದೇಶಿ ಪ್ರವಾಸಿಗಳ ಸೆಳೆಯುವುದು, ಪ್ರಚಾರ ರಾಯಭಾರಿ ಆಯ್ಕೆ, ಪ್ರವಾಸಿಗರ ಸಂಖ್ಯೆ ಹೆಚ್ಚಿಸುವುದು ಎಕ್ಸಪೋ ಮುಖ್ಯ ಉದ್ದೇಶವಾಗಿದೆ. ಇದರಿಂದ ಅಂದಾಜು 1 ಕೋಟಿ ದೇಶಿ ಹಾಗೂ 1 ಲಕ್ಷ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದರು.

ಇದರ ಜತೆಗೆ ತೆರಿಗೆ ಮೂಲಕ ರಾಜ್ಯಕ್ಕೆ ಮುಂದಿನ 3-4 ವರ್ಷದಲ್ಲಿ ₹2750 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಲ್ಲದೇ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚುವ ಜತೆಗೆ ಕುಶಲ, ಅರೆಕುಶಲ ಯುವಕ, ಯುವತಿಯರಿಗೆ ತಮ್ಮ ತಮ್ಮ ಸ್ಥಳಗಳಲ್ಲಿಯೇ ಉದ್ಯೋಗ ದೊರೆಯಲಿದ್ದು, ನಗರಗಳಿಗೆ ವಲಸೆ ಹೋಗುವುದು ತಪ್ಪಲಿದೆ ಎಂದರು.

ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಅಸಂರಕ್ಷಿತ ಸ್ಮಾರಕಗಳಿದ್ದು, ಅವುಗಳಲ್ಲಿ 800ಕ್ಕೂ ಹೆಚ್ಚು ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ. ಉಳಿದಿವುಗಳನ್ನು ಬೆಳಕಿಗೆ ತರಲಾಗುವುದು. ಅವುಗಳನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್‌ ಮುಖಂಡರಾದ ಮಹೇಂದ್ರ ಸಿಂಘಿ, ಸದಾನಂದ ಡಂಗನವರ ಸೇರಿದಂತೆ ಇತರರು ಇದ್ದರು.