ಸಾರಾಂಶ
ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಆಶಾಕಿರಣವಾಗಿದೆ
ಕನ್ನಡಪ್ರಭ ವಾರ್ತೆ ಗಂಗಾವತಿ
ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಆಶಾಕಿರಣವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ಇಲ್ಲಿಯ ವಡ್ಡರಹಟ್ಟಿಯಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ 109ನೇ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಬಿಸಿಎ ಕಾಲೇಜಿನ ಗಣಕಯಂತ್ರದ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಕೆಎಲ್ ಇ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿಯೇ ಅದ್ವೀತಿಯ ಸಾಧನೆ ಮಾಡಿದೆ. ಸಹಸ್ರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಸೇರಿದ್ದಾರೆ. ಆ ಕೀರ್ತಿ ಸಂಸ್ಧೆಗೆ ಸಲ್ಲುತ್ತದೆ ಎಂದರು. ಗಂಗಾವತಿಯಲ್ಲಿಯು ಕೆಎಲ್ ಇ ಕಾಲೇಜು ವಿವಿಧ ತರಗತಿಗಳನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಕಾಲೇಜಿಗೆ ಮತ್ತು ಪಾಲಕರಿಗೆ ಕೀರ್ತಿ ತರಬೇಕೆಂದರು. ವಹಿಸಿದ್ದ ಅಧ್ಯಕ್ಷತೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಎಚ್. ಗಿರಿಯಪ್ಪ ಮಾತನಾಡಿ, ಕೆಎಲ್ ಇ ಸಂಸ್ಥೆಯು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ ಎಂದರು.ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ದೊಡ್ಡಬಸಮ್ಮ, ಆಡಳಿತ ಮಂಡಳಿ ಸದಸ್ಯರಾದ ಎಚ್. ಪ್ರಭಾಕರ್ ವಕೀಲರು, ವಿರುಪಾಕ್ಷಪ್ಪ ಜವಳಿ, ಬಸವರಾಜ ದೇಸಾಯಿ, ಪ್ರಾಚಾರ್ಯರಾದ ಎಸ್.ಸಿ. ಪಾಟೀಲ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪೋಕ್ಸೋ ಕಾಯಿದೆ-ಜಾಗೃತಿ ಕಾರ್ಯಕ್ರಮ:
ಕೊಪ್ಪಳ ಸಮೀಪದ ಭಾಗ್ಯನಗರದ ಜ್ಞಾನಬಂಧು ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಫೋಕ್ಸೊ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ಪಿಎಸ್‌ಐ ಡಿ.ಎಸ್. ಆಂಜನೇಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ವಾಹನ ಸಂಚಾರಿ ನಿಯಮಗಳ ಪಾಲನೆ ಮಾಡುವಂತೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ವಿಶ್ವನಾಥ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಅರಿವು ಮೂಡಿಸಿದರು.ಈ ಸಂದರ್ಭ ಉಪ ಪ್ರಾಚಾರ್ಯೆ ಜ್ಯೋತಿ ಎಸ್.ಎಸ್. ಸೇರಿದಂತೆ ಹಲವರು ಇದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಆರ್. ರೇಣುಕರಾಜ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕಿ ಮೇನಕಾ ವಂದಿಸಿದರು. ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.