ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿನಾಡಿನಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಎಲ್‌ಇ ಸಂಸ್ಥೆ ಕನ್ನಡದ ಭದ್ರಕೋಟೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಡಾ.ಬಸವರಾಜ ಜಗಜಂಪಿ ಹೇಳಿದರು.ನಗರದ ಕೆಎಲ್ಇ ಸೆಂಟಿನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆದ ಎರಡು ದಿನಗಳ ಕನ್ನಡ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಳಗಾವಿ ಮಹಾನಗರ ಕರ್ನಾಟಕದ ಉಪರಾಜಧಾನಿ, ಕರ್ನಾಟಕದ ಮಣಿಮುಕುಟದಂತಿರುವ ಬೆಳಗಾವಿಯ ಇಲ್ಲಿನ ಹೊರವಲಯದಲ್ಲಿ ನಿರ್ಮಾಗೊಂಡಿರುವ ಸುವರ್ಣ ವಿಧಾನಸೌಧ ವಿಶೇಷ ಹೆಮ್ಮೆ ತಂದಿದೆ. 2011ರಲ್ಲಿ ಬೆಳಗಾವಿಯಲ್ಲಿ ಎರಡನೆಯ ವಿಶ್ವಕನ್ನಡ ಸಮ್ಮೇಳನ ಮೂರುದಿನಗಳ ಕಾಲ ಅದ್ದೂರಿಯಾಗಿ ನಡೆದಿದೆ, ಇದೀಗ ಎರಡು ದಿನಗಳ ಕಾಲ ವೈದ್ಯ ಬರಹಗಾರ ಸಮ್ಮೇಳನ ನಡೆಸುತ್ತಿರುವುದು ಅಭಿನಂದನೀಯ.ತುಂಬ ಅರ್ಥಪೂರ್ಣ ಹಾಗೂ ಉಪಯುಕ್ತ ಗೋಷ್ಠಿಗಳು, ಕಾರ್ಯಾಗಾರಗಳು, ರಸಪ್ರಶ್ನೆ ಕಾರ್ಯಕ್ರಮಗಳು ಯುವ ಬರಹಗಾರರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವೈದ್ಯಕೀಯ ಕಾಲೇಜಿನ ಕನ್ನಡ ಬಳಗಗಳು ಕೂಡ ಪೂರಕ ವಾತಾವರಣ ನಿರ್ಮಿಸುತ್ತವೆ. ವೈದ್ಯವಿಜ್ಞಾನದ ಎಲ್ಲ ಶಿಸ್ತುಗಳಲ್ಲಿ ಪರಿಶ್ರಮದ ಸಾಧನೆಗೈದವರು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ, ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ವೈದ್ಯ ಸಾಹಿತಿಗಳು ಪರಸ್ಪರ ಮುಖಾಮುಖಿಯಾಗಲು ಇಂಥ ಸಮಾವೇಶಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಇಂದಿನ ಯುವಯುವತಿಯರು ತುಂಬ ಪ್ರತಿಭಾವಂತರು ಅಷ್ಟೇ ಜಾಣರು. ಅವರ ಆಸಕ್ತಿ ಯಾವುದರಲ್ಲಿದೆ ಎಂಬುದನ್ನು ಕಂಡುಕೊಂಡು ಅವರನ್ನು ಆ ನಿಟ್ಟಿನಲ್ಲಿ ರೂಪಿಸುವ ಕೆಲಸ ಆಗಬೇಕು. ಅವರಲ್ಲಿನ ರುಚಿ-ಅಭಿರುಚಿಗಳನ್ನು ಪರಿಷ್ಕರಿಸುವ ಕಾರ್ಯಕೂಡ ಆಗಬೇಕು. ಜೀವನೋಪಾಯಕ್ಕಾಗಿ ಒಂದು ವೃತ್ತಿ, ಆನಂದಕ್ಕಾಗಿ ಒಂದು ಕಲೆ ಆಶ್ರಯಿಸುವ ವ್ಯಕ್ತಿ ನೆಮ್ಮದಿಯ ಬದುಕು ನಡೆಸುತ್ತಾನೆ. ಅದರೊಂದಿಗೆ ಸಾಹಿತ್ಯಸೃಷ್ಟಿಗೆ ತೊಡಗುವವರು ದೈನಂದಿನ ವೃತಿ ಬದುಕಿನ ಒತ್ತಡದಿಂದ ಹೊರಬಂದು ಒಂದು ಅಪೂರ್ವ ವಿಶ್ರಾಂತಿ ಪಡೆಯಲು ಸಾಧ್ಯ ಎಂದು ಹೇಳಿದರು.ವೃತ್ತಿ ವೃತ್ತಿ ಯಾವುದೇ ಇರಲಿ, ವ್ಯಕ್ತಿಯ ಪ್ರವೃತ್ತಿ ತುಂಬ ಮುಖ್ಯ. ಸಾಹಿತ್ಯ-ಸಂಗೀತ-ನಾಟಕಗಳನ್ನು ಪ್ರೀತಿಸುವವರು ಎಲ್ಲಿದ್ದರೂ ಸುಖಿಗಳು, ಅಂತೆಯೇ ಎಲ್ಲರಿಗೂ ಒಂದಿಲ್ಲ ಒಂದು ಕ್ಷೇತ್ರದಲ್ಲಿ ಆಸಕ್ತಿಯಿರುತ್ತದೆ. ಆ ಆಸಕ್ತಿಯನ್ನು ಘೋಷಿಸಿಕೊಂಡು ಬೆಳೆಯಬೇಕು. ಆಸಕ್ತರನ್ನು ಬೆಳೆಸಬೇಕು.
ಈ ಪ್ರಪಂಚದಲ್ಲಿ ಸಾವಿಲ್ಲದ ಏಕಮಾತ್ರ ವಸ್ತುವೆಂದರೆ ಪುಸ್ತಕ ಎಂಬುದು ಜನಜನಿತ ಮಾತು. ಪುಸ್ತಕಗಳು ಜಗತ್ತನ್ನು ಆಳುತ್ತವೆ ಎಂಬ ಮಾತು ಕೂಡ ಅಷ್ಟೇ ಗಮನಾರ್ಹ. ಭಾರತ ವರ್ಷದ ಆದಿ ಕವಿ ವಾಲ್ಮೀಕಿ ಮತ್ತು ಕವಿವ್ಯಾಸರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅವರು ತಪಸ್ಸಿನ ಫಲವಾಗಿ ಸೃಷ್ಟಿಗೊಂಡ ರಾಮಾಯಣ ಮಹಾಭಾರತದಂತಹ ಮಹಾನ ಗ್ರಂಥಗಳು ತಮ್ಮ ಮೌಲ್ಯದರ್ಶಗಳಿಂದ ಭಾರತೀಯರಿಗೆ ಇಂದಿಗೂ ಪರಮಪೂಜ್ಯವಾಗಿವೆ. ಕನ್ನಡ ವೈದ್ಯ ಬರಹಗಾರರ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಶ್ರೀಮಂತ ಪರಂಪರೆಯಿದೆ. ಯುವ ಲೇಖಕರು ಆ ಚರಿತ್ರೆಯ ಅಧ್ಯಯನಕ್ಕೆ ಶೃದ್ಧೆಯಿಂದ ಒಡ್ಡಿಕೊಳ್ಳಬೇtಕು. ಪೂರ್ವಸೂರೆಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಸಾಹಿತ್ಯ ಸೃಷ್ಟಿಗೆ ತೊಡಗಬೇಕು ಎಂದು ಹೇಳಿದರು.ಬರವಣಿಗೆ ತುಂಬ ಶ್ರಮ ಬೇಡುವ ಕೆಲಸ. ಅದಕ್ಕಾಗಿ ಹೆಚ್ಚು ಹೆಚ್ಚು ಓದಬೇಕು. ಸಮಯವನ್ನು ಹೊಂದಿಸಿಕೊಳ್ಳಬೇಕು. ಒಂದಿಷ್ಟು ತ್ಯಾಗ ಮಾಡಬೇಕು. ತ್ಯಾಗದಿಂದ ಮಾತ್ರ ದೊಡ್ಡ ಕೆಲಸಗಳಾಗುತ್ತವೆ ಎಂಬುದು ಅನುಭವದ ಮಾತು. ಅನುಭವವನ್ನು ಅಕ್ಷರಕ್ಕಿಳಿಸುವ ವ್ಯಕ್ತಿಗೆ ಅಭಿವ್ಯಕ್ತಿ ಸಾಮರ್ಥ್ಯವಿರಬೇಕು. ಸೌಂದರ್ಯ ದೃಷ್ಟಿಯೊರಬೇಕು. ತನ್ನಲ್ಲಿರುವ ಸೃಜನಶೀಲತೆಯನ್ನು ಸಮರ್ಪಕವಾಗಿ ಬಳಸಿಕೊಂಡು ರಚನೆಗಿಳಿದವರಿಂದ ಒಳ್ಳೆಯ ಕೃತಿಗಳು ಬರುತ್ತವೆ. ಆ ಕೃತಿಗಳು ನಮ್ಮ ಸಮಾಜವನ್ನು ತಿದ್ದುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಸ್ವಸ್ಥ ಸಮಾಜ ಕಟ್ಟುವಲ್ಲಿ ವೈದ್ಯಸಾಹಿತ್ಯ ಖಂಡಿತಾಗಿಯೂ ನೆರವು ನೀಡುತ್ತದೆ ಎಂದು ಹೇಳಿದರು.
ಡಾ ರವೀಂದ್ರ ಅಣಿಗೊಳ್, ಭಾರತೀಯ ವೈಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ್ ಎಸ್, ಜೆ ಎನ್ ಎಂ ಸಿ ಪ್ರಾಚಾರ್ಯ ಡಾ. ಏನ್ ಎಸ್ ಮಹಾನ್ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ. ನೇತ್ರಾವತಿ ಕವಿ ನಿರೂಪಿಸಿದರು.5 ನಿರ್ಣಯ ಅಂಗೀಕಾರ: ಬೆಳಗಾವಿಯಲ್ಲಿ ನಡೆದ ಎರಡು ದಿನಗಳ ಕನ್ನಡ ವೈದ್ಯ ಬರಹಗಾರರ 5ನೇ ರಾಜ್ಯ ಸಮ್ಮೇಳನ ಸಮಾರೋಪದಲ್ಲಿ 7 ನಿರ್ಣಯ ಅಂಗೀಕರಿಸಲಾಗಿದೆ.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ನಾ ಸೋಮೇಶ್ವರ ಅವರು,ಕನ್ನಡ ಸಂಘ, ಬಳಗಗಳ ಮೂಲಕ ಕನ್ನಡ ವೈದ್ಯ ಸಾಹಿತ್ಯದ ಬೆಳವಣಿಗೆ, ಪ್ರಾತಿನಿಧಿಕ ಕಥಾ ಸಂಕಲನ ಪ್ರಕಟಣೆ, ಪ್ರಸಾರಾಂಗ ಸ್ಥಾಪನೆ, ಇತರ ಪ್ರಸಾರಾಂಗಗಳ ಜೊತೆ ಸಹಕಾರ, ವೈದ್ಯಕೀಯ ಗ್ರಂಥಾಲಯಗಳಲ್ಲಿ ಕನ್ನಡ ವೈದ್ಯ ಸಾಹಿತ್ಯ ಲಭ್ಯತೆ, ಪಠ್ಯ ಪುಸ್ತಕಗಳಲ್ಲಿ ಆರೋಗ್ಯ ಸಾಹಿತ್ಯಕ್ಕೆ ಒತ್ತು, ಕನ್ನಡ ವೈದ್ಯ ಬರಹಗಾರರ ಮಾಹಿತಿ ದಾಖಲಿಸುವ ನಿರ್ಣಯ ಅಂಗೀಕರಿಸಿತು.