ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರಾಯೋಜಕರ ನೆರವಿನಿಂದ ನೀಡಲಾಗುವ ಈ ಸಾಲಿನ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2024ಕ್ಕೆ ಜಿಲ್ಲೆಯ ಒಟ್ಟು ಆರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.ಉದ್ಯಮಿ ಕೆ. ಎಂ. ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅವರು ತಮ್ಮ ಸಹೋದರ ದಿ.ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸುತ್ತಿರುವ ಕೆ. ಎಂ. ಎ. ವಿಶೇಷ ಪ್ರತಿಭಾ ಪುರಸ್ಕಾರ ಇದಾಗಿದೆ. ಕಳೆದ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್. ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಗೋಣಿಕೊಪ್ಪಲಿನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಡಿ. ಭಾಷಿತ (ರಾಜ್ಯಮಟ್ಟದಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿ) ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಡಿಯಾನ ನವೀನ್ ಕ್ರಮವಾಗಿ ಆಯ್ಕೆಗೊಂಡಿದ್ದಾರೆ. ಈ ಪುರಸ್ಕಾರವು ತಲಾ ಹತ್ತು ಸಾವಿರ ರು. ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರವನ್ನು ಒಳಗೊಂಡಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಎಂ.ಎ. ಮಹಮ್ಮದ್ ಪ್ರಾಯೋಜಿಸಿರುವ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಪೊನ್ನಂಪೇಟೆಯ ಎ.ಎಸ್. ಮೊಹಮ್ಮದ್ ಆದಿಲ್ (598 ಅಂಕ), ಮೂರ್ನಾಡು ಸಮೀಪದ ಹೊದ್ದೂರಿನ ಎಂ. ಎ. ಅಫ್ಸ (579 ಅಂಕ), ದ್ವಿತೀಯ ಪಿಯುಸಿ ವಿಭಾಗದಲ್ಲಿ ಮೂರ್ನಾಡು ಸಮೀಪದ ಐಕೊಳದ ಪಿ. ಝಡ್. ಜುವೈರಿಯಾ (588 ಅಂಕ ) ಹಾಗೂ ಪೊನ್ನಂಪೇಟೆಯ ಎ. ಎಸ್. ಮೊಹಮ್ಮದ್ ಶಾಹಿಲ್ (547 ಅಂಕ ) ಅವರನ್ನು ಆಯ್ಕೆಗೊಳಿಸಲಾಗಿದೆ.ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಶುಕ್ರವಾರ ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಸಮಾರಂಭಕ್ಕೆ ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕೆ.ಎಂ.ಎ. ಪ್ರಕಟಣೆಯಲ್ಲಿ ತಿಳಿಸಿದೆ.