ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ವಿದ್ಯಾರ್ಥಿ ದೆಸೆಯಲ್ಲಿಯೇ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ತಿಳಿಸಿದರು.ಪಟ್ಟಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕೆ.ಎನ್.ನಾಗೇಗೌಡ ಕಾನೂನು ಕಾಲೇಜು ಸಂಯುಕ್ತಾಶ್ರದಲ್ಲಿ ನಡೆದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರು ಹಲವು ದೇಶದ ಸಂವಿಧಾನಗಳನ್ನು ಓದಿ ದೇಶಕ್ಕೆ ಬೇಕಾದ ಅಮೂಲ್ಯ ಸಂವಿಧಾನವನ್ನು 2 ವರ್ಷ 11 ತಿಂಗಳು 18 ದಿನ ಬರೆದು ದೇಶಕ್ಕೆ ಅರ್ಪಿಸಿದ್ದಾರೆಂದು ಹೇಳಿದರು.
ಯಾವುದೇ ಕಾಯ್ದೆ ಬಂದರೂ ಕೂಡ ಸಂವಿಧಾನದ ಅಡಿಯಲ್ಲಿಯೇ ಬರಬೇಕು. ಸಾರ್ವಜನಿಕರ ವಿರೋಧ ಕಾಯ್ದೆ ಬಂದರೇ ಅದನ್ನು ತಗೆದುಹಾಕುವ ಹಕ್ಕನ್ನು ನ್ಯಾಯಾಲಯ ಹೊಂದಿದೆ. ಸಂವಿಧಾನದ ಆಶಯದಲ್ಲಿರುವ ರೀತಿಯಲ್ಲಿ ಪ್ರತಿಯೊಬ್ಬರು ಬದುಕಬೇಕೆಂದು ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಸಂವಿಧಾನದ ಅಂಶಗಳು ಸಮರ್ಪಕವಾಗಿ ಜಾರಿಯಾದರೇ ದೇಶವು ಸುಭೀಕ್ಷೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಾಕ್‌ಥಾನ್ ಆಯೋಜನೆ ಮಾಡಲಾಗುತ್ತಿದೆ. ವಕೀಲರ ಸಂಘದ ವತಿಯಿಂದ ಸಂವಿಧಾನ ಓದು ಪುಸ್ತಕವನ್ನು ನೀಡಲಾಗುತ್ತಿದೆ ಎಂದರು.
ನ್ಯಾಯಾಲಯದ ಆವರಣದಿಂದ ವಾಕ್‌ಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗವಿರುವ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಪುಷ್ಟನಮನ ಸಲ್ಲಿಸಿ ನಂತರ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದವರೆಗೆ ವಾಕ್‌ಥಾನ್ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಚಿನ್ ಕುಮಾರ್ ಶಿವಪೂಜಿ, ಸಹಾಯಕ ಸರ್ಕಾರಿ ಅಭಿಯೋಜ ಎಂ. ಶಂಕರಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ ನಟೇಶ್, ಅಪರ ಸರ್ಕಾರಿ ವಕೀಲರು ಎಂ.ಎಸ್ ಶ್ರೀಕಂಠಸ್ವಾಮಿ, ಕೆ.ಎನ್ ನಾಗೇಗೌಡ ಕಾನೂನು ಕಾಲೇಜು ಪ್ರಾಂಶುಪಾಲ ಹೆಚ್.ಎನ್ ಮಂಜು ಸೇರಿದಂತೆ ವಿವಿಧ ಇಲಾಖೆಯ ಅಧೀಕಾರಿಗಳು ರೋಟರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.