ಎಲ್ಲ ಗೊತ್ತಿದ್ದು ಹೇಗೆ ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟಿದ್ದು ಹೇಗೆ: ಶ್ರೀನಿವಾಸ್‌ ಪ್ರಶ್ನೆ

| Published : May 03 2024, 01:02 AM IST

ಎಲ್ಲ ಗೊತ್ತಿದ್ದು ಹೇಗೆ ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟಿದ್ದು ಹೇಗೆ: ಶ್ರೀನಿವಾಸ್‌ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಮುರಿಯಬೇಕು. ಜತೆಗೆ ಸ್ತ್ರೀ ಕಂಟಕ ಪ್ರಜ್ವಲ್‌ ರೇವಣ್ಣ ಅವರನ್ನು ರಕ್ಷಿಸಲು ಮುಂದಾಗಿರುವ ಬಿಜೆಪಿ ನಾಯಕರು ರಾಜ್ಯ ಹಾಗೂ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ನೇತೃತ್ವದಲ್ಲಿ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದ ಬಳಿ ಸಾಂಕೇತಿಕವಾಗಿ ಪಂಜಿನ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಪ್ರಜ್ವಲ್‌ ಕೂಡಲೇ ಎಸ್‌ಐಟಿ ಮುಂದೆ ಹಾಜರಾಗಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಜ್ವಲ್‌ ಲೈಂಗಿಕ ಹಗರಣದ ಬಗ್ಗೆ ಮೊದಲೇ ಮಾಹಿತಿ ಇತ್ತು. ಹೀಗಿದ್ದರೂ ಪ್ರಜ್ವಲ್‌ಗೆ ನೀಡುವ ಪ್ರತಿ ಮತವೂ ನನಗೆ ನೀಡುವ ಬೆಂಬಲ ಎಂದು ಹೇಳಿದ್ದಾರೆ. ಇದೀಗ 400 ಅತ್ಯಾಚಾರ ಮಾಡಿರುವ ಆರೋಪಿಯನ್ನು ವಿದೇಶಕ್ಕೆ ಪರಾರಿಯಾಗಲು ಹಾಗೂ ಪ್ರಕರಣ ಮುಚ್ಚಿ ಹಾಕಲು ನೆರವು ನೀಡುತ್ತಿದ್ದಾರೆ. ಬೇಟಿ ಬಚಾವೋ ಎನ್ನುವ ಮೋದಿ ಮೊದಲು ಪ್ರಕರಣದ ಬಗ್ಗೆ ಬಾಯಿ ಬಿಟ್ಟು ದೇಶದ ಕ್ಷಮೆ ಕೋರಬೇಕು ಎಂದು ಒತ್ತಾಯ ಮಾಡಿದರು.

ಜಿ.ಸಿ. ಚಂದ್ರಶೇಖರ್‌ ಮಾತನಾಡಿ, ಪ್ರಜ್ವಲ್‌ ರೇವಣ್ಣ ವಿರುದ್ಧ ಬಿಜೆಪಿಯ ಹೊಳೆನರಸಿಪುರ ಅಭ್ಯರ್ಥಿ ದೇವರಾಜಗೌಡ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದರು. ಲೈಂಗಿಕ ಹಗರಣದ ಬಗ್ಗೆ ಗೊತ್ತಿದ್ದರೂ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದೀಗ ಲೈಂಗಿಕ ಹಗರಣ ನಡೆಸಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದರು.ರಾಜ್ಯ ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಹಾಜರಿದ್ದರು.