ಸಾರಾಂಶ
ಕನ್ನಡಪ್ರಭ ವಾರ್ತೆ ಕೊಡೇಕಲ್
ಓದುಗರಲ್ಲಿ ಕ್ರಿಯಾಶೀಲತೆಯನ್ನುಂಟು ಮಾಡಿ ದೈನಂದಿನ ವಿಚಾರಗಳನ್ನು ಕಟ್ಟಿಕೊಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಹೆಚ್ಚು ಜ್ಞಾನವನ್ನು ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕಾಧ್ಯಕ್ಷ ಹಾಗೂ ಹಿರಿಯ ವರಿಗಾರರಾದ ವೆಂಕಟಗಿರಿ ದೇಶಪಾಂಡೆ ಹೇಳಿದರು.ಕೊಡೇಕಲ್ ವಲಯ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದ ಜನಕ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿಶೇಷ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ದೂರದರ್ಶನ, ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿ ನೀಡಬಹುದಷ್ಟೇ, ಆದರೆ ಪತ್ರಿಕೆಗಳನ್ನು ಓದುವುದರಿಂದ ಪ್ರಪಂಚದ ಆಗು-ಹೋಗುಗಳು ನಮ್ಮ ಸ್ಮೃತಿಪಟಲದಲ್ಲಿ ಮುದ್ರೆ ಹಾಕಿದಂತೆ ಉಳಿಯುತ್ತವೆ ಎಂದರು.
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪೂರಕವಾದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಶಿಕ್ಷಣ, ಕ್ರೀಡೆ, ಆರ್ಥಿಕ ವ್ಯವಹಾರ ಸೇರಿದಂತೆ ಹತ್ತು ಹಲವಾರು ವಿಷಯಗಳು ಲಭ್ಯವಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಪ್ರತಿಕೆಗಳು ವರದಾನವಿದ್ದಂತೆ. ಆದರೆ, ಇಂದು ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ನೋಡುವುದರಲ್ಲಿಯೇ ಕಾಲ ಕಳೆಯುತ್ತಿರುವುದು ವಿಷಾದನೀಯ. ಮೊಬೈಲ್ ನೋಡುವುದರ ಬದಲು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.ಕೊಡೇಕಲ್ ವಲಯ ಕಸಾಪ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಮಾತನಾಡಿ, ಪತ್ರಿಕೆಗಳು ಪ್ರಚಲಿತ ವಿದ್ಯಮಾನಗಳನ್ನು ತಿಳಿಸುವ ಸಂವಹನ ಕೇಂದ್ರಗಳಿದ್ದಂತೆ ಎಂದರು.
ಕೊಡೇಕಲ್ ವಲಯದ ಕಸಾಪ ವತಿಯಿಂದ ಪತ್ರಕರ್ತರಾದ ಬಸವರಾಜ ಅಂಗಡಿ, ವೆಂಕಟಗಿರಿ ದೇಶಪಾಂಡೆ, ಪವನ ದೇಶಪಾಂಡೆ, ಶಿವಣ್ಣ ಚಿನ್ನಾಕಾರ, ಅನಿಲ್ ಬಿರಾದಾರ, ಪ್ರೀತಿ ರಾಠಿ ಅವರನ್ನು ಸನ್ಮಾನಿಸಲಾಯಿತು.ಗುರುರಾಜ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಸೋಮಶೇಖರ ಪಂಜಗಲ್, ಹಿರಿಯ ಪತ್ರಕರ್ತ ಬಸವರಾಜ ಅಂಗಡಿ, ಚಂದ್ರಶೇಖರ ಹೊಕ್ರಾಣಿ, ಭೀಮನಗೌಡ ಬಿರಾದಾರ್, ಬಸಣ್ಣ ಗೋಡ್ರಿ, ಸಂಗನಗೌಡ ಧನರೆಡ್ಡಿ, ನೀಲಪ್ಪ ತೆಗ್ಗಿ, ಚರಲಿಂಗ ತಂಗಡಗಿ, ಸಂಗೀತಾ ದೋರಿಗೋಳ, ಸುವರ್ಣ, ಪದ್ಮಾವತಿ, ಸೇರಿದಂತೆ ಇತರರಿದ್ದರು. ನಾಗರಾಜ ಪಾಟೀಲ್ ನಿರೂಪಿಸಿದರು. ಹಣಮೇಶ ಗಿಡ್ಡನೂರ ಸ್ವಾಗತಿಸಿದರು. ಮೌನೇಶ ಹೂಗಾರ ಪ್ರಾರ್ಥಿಸಿ, ವಂದಿಸಿದರು.