ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಹಠಯೋಗಿ ಶ್ರೀ ಗುರು ಕೊಟ್ಟೂರೇಶ್ವರರ 138ನೇ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಗದಗ

ಎಐ ಗುಲಾಮರಾಗದಿರಲು ಧರ್ಮ ಆಧಾರದ ಜ್ಞಾನ ಅತಿ ಅಗತ್ಯ. ನಮ್ಮ ಮೂಲ ಧರ್ಮದ ಆಧಾರದ ಮೇಲಿರುವ ಜ್ಞಾನವನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳಬೇಕು, ಉಳಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಹಠಯೋಗಿ ಶ್ರೀ ಗುರು ಕೊಟ್ಟೂರೇಶ್ವರರ 138ನೇ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಭಗವಂತ ಜ್ಞಾನ ಕೊಟ್ಟಿದ್ದಾನೆ. ಜ್ಞಾನದಿಂದ ಅಕ್ಷರ ಜ್ಞಾನ, ಅದರಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ ಬೆಳೆಯಿತು. ಮೊದಲು ಕಂಪ್ಯೂಟರ್ ನಮ್ಮ ಶಿಷ್ಯನಂತೆ ಕೆಲಸ ಮಾಡುತ್ತಿತ್ತು. ಆದರೆ ಈಗ ಕೃತಕ ಬುದ್ಧಿಮತ್ತೆ ಬಂದಿರುವುದರಿಂದ ಶಿಷ್ಯನೇ ಗುರುವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

​ಜಗತ್ತಿನಲ್ಲಿ ಈಗ ಕ್ಷುಲ್ಲಕ ಕಾರಣಗಳಿಗಾಗಿ ಯುದ್ಧಗಳು ನಡೆದು ಅಮಾಯಕರು ಸಾಯುತ್ತಿದ್ದಾರೆ. ಯುದ್ಧದಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ, ಅಲ್ಲಿ ಮಾನವೀಯತೆ ಮಾತ್ರ ಸೋಲುತ್ತದೆ. ಆಟಂ ಬಾಂಬ್ ಅನ್ನು ವಿಜ್ಞಾನಿ ತಯಾರಿಸಿದರೂ ಅದನ್ನು ಎಲ್ಲಿ, ಯಾವಾಗ ಬಳಸಬೇಕು ಎಂದು ರಾಜಕಾರಣಿಗಳೇ ನಿರ್ಧರಿಸುತ್ತಾರೆ. ಆದ್ದರಿಂದಲೇ ಆಡಳಿತ ನಡೆಸುವವರಿಗೆ ದಯೆ ಇರಬೇಕು ಎಂದ ಅವರು, ಪ್ಲೇಟೋನ ರಾಜನು ತತ್ವಜ್ಞಾನಿಯಾಗಿರಬೇಕು ಎಂಬ ನುಡಿಯನ್ನು ಅವರು ಸ್ಮರಿಸಿದರು.

ಮಠಕ್ಕೆ ಪ್ರತಿದಿನ ಸುಮಾರು ಹತ್ತು ಸಾವಿರ ಭಕ್ತರು ಭೇಟಿ ನೀಡುತ್ತಿದ್ದು, ಇಲ್ಲಿ ಸಮುದಾಯ ಭವನದ ಅವಶ್ಯಕತೆ ಇದೆ ಎಂದು ಭಕ್ತರು ಮನವಿ ಮಾಡಿದ್ದಾರೆ. ಭಕ್ತರ ಅನುಕೂಲಕ್ಕಾಗಿ ನನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು ₹10 ಲಕ್ಷ ಅನುದಾನ ನೀಡುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ​ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ, ಮುಖಂಡರಾದ ಉಮೇಶ್ ಹಳ್ಳಾಪುರ, ಹಂದಪ್ಪ ಆರುಗೇರಿ ಉಪಸ್ಥಿತರಿದ್ದರು.