ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಜ್ಞಾನದ ಬೆಳಕು ಗುರುಗಳು. ಜ್ಞಾನವು ಆತ್ಮೋದ್ಧಾರಕ್ಕೆ ಪೂರಕವಾಗಿದೆ ಎಂದು ಉಜಿರೆಯ ಶ್ರೀರಾಮ ಕ್ಷೇತ್ರದ ಶ್ರೀ ಬೃಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.ಶನಿವಾರ ನಗರದ ಹೊಟೇಲ್ ಸುಪ್ರಿಯಾ ಇಂಟರ್‌ನ್ಯಾಶನಲ್‌ನಲ್ಲಿ ಶಿರಸಿ ತಾಲೂಕಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡ ಅಭಿನಂದನಾ ಪಾದಪೂಜೆ ಸೇವೆ ಸ್ವೀಕರಿಸಿ, ಆಶೀರ್ವಚನ ನೀಡಿದರು.
ಇಂದ್ರೀಯಗಳು ಗಟ್ಟಿಯಾಗಿರುವಾಗ, ಸಂಪತ್ತು, ಆಸ್ತಿ ಇರುವಾಗ ಭಗವಂತನ ನೆನಪು ಬರುವುದಿಲ್ಲ. ದಿನನಿತ್ಯದ ಬದುಕಿನಲ್ಲಿ ನೆಮ್ಮದಿಯಿಂದ ಇರಬೇಕು ಎಂದಾರೆ ಭಗವಂತನ ಸ್ಮರಣೆ ಮಾಡಬೇಕು. ದ್ವೇಷ, ಮತ್ಸರ, ಅಸೂಯೆ ದೂರಮಾಡಿ ನಾವೆಲ್ಲರೂ ಸಂಸ್ಕಾರವಂತರಾಗಿ ಜ್ಞಾನಿಗಳಾಗಬೇಕು. ಜಾತಿ ಸಂಘಟನೆಯ ನಮ್ಮೊಳಗಡೆ ಇರಬೇಕು. ಹೊರಗಡೆ ಬಂದಾಗ ಸಮಾನೆಯ ಸಿದ್ಧಾಂತದಿಂದ ಸಮಾಜದಲ್ಲಿ ಬಾಳಬೇಕು ಎಂದರು.ನಾನು ಎಂಬ ಅಹಂ ಇರಬಾರದು. ಕರ್ಮಕ್ಕೆ ಅನುಗುಣವಾಗಿ ಉದ್ಯೋಗ, ಸಂಪತ್ತು ದೇವರು ನೀಡುತ್ತಾರೆ. ಅಧಿಕಾರ ವ್ಯಾಪ್ತಿ ಇದೆ ಎಂಬ ಭ್ರಮೆಯಲ್ಲಿ ನಮ್ಮ ಇತಿಮಿತಿಯನ್ನು ಲೆಕ್ಕಿಸದೇ ಯಾವುದೋ ಕಾರ್ಯ ಮಾಡುತ್ತೇವೆ. ಅದನ್ನು ದೂರವಿಟ್ಟು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಶಾಸಕ ಹಾಗೂ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಗುರು ಮತ್ತು ದೇವರ ಆಶೀರ್ವಾದದಿಂದ ಹೆಜ್ಜೆ ಇಟ್ಟಾಗ ಎಲ್ಲ ಕೆಲಸ ಈಡೇರುತ್ತದೆ. ಅಲ್ಲದೇ ಗುರಿ ತಲುಪಲು ಸಾಧ್ಯವಾಗುತ್ತದೆ. 1008 ಮಹಾ ಮಂಡಲೇಶ್ವರರಾಗಿ ಪಟ್ಟಾಭಿಷಕ್ತರಾದ ಬೃಹ್ಮಾನಂದ ಸ್ವಾಮೀಜಿಯ ಪಾದಪೂಜೆ ಮಾಡಿ ಎಂಬ ಸಂಕಲ್ಪ ಇಟ್ಟುಕೊಳ್ಳಲಾಗಿತ್ತು. ಅದು ಈಗ ಸಾಕಾರಗೊಂಡಿದೆ ಎಂದರು.ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯದ ಸಂಘಟನೆಗಾಗಿ, ಸಮಾಜಕ್ಕೆ ಸಂಸ್ಕಾರ ನೀಡುತ್ತಾ ಮಾರ್ಗದರ್ಶನವನ್ನು ಶ್ರೀಗಳು ನೀಡುತ್ತಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಕೋನದಿಂದ ವಿವಿಧ ಕಾರ್ಯಚಟುವಟಿಕೆಗಳನ್ನು ಶ್ರೀಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನಾರಾಯಣ ಗುರುನಗರದಲ್ಲಿ ಭವ್ಯ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸಮಾಜದ ಸಂಘಟನೆ, ಸಾಂಸ್ಕೃತಿಕ ಧಾರ್ಮಿಕ ಸಂಸ್ಕೃತಿ ಬರಬೇಕು. ಭವಿಷ್ಯತ್ತಿನ ವಿಚಾರಕ್ಕಾಗಿ ಒಂದಾಗಬೇಕು ಶ್ರೀಗಳ ಆಶಯದಂತೆ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದರು.
ಜಿಲ್ಲೆಯ ವಿವಿಧ ತಾಲೂಕಿನ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರಿದ್ದರು. ಶಿರಸಿ ತಾಲೂಕಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಪರವಾಗಿ ಯುವ ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ ದಂಪತಿ ಪಾದಪೂಜೆ ನೆರವೇರಿಸಿದರು. ಶಿರಸಿ ತಾಲೂಕಾ ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಮಾದೇವಿ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ರತ್ನಾಕರ ನಾಯ್ಕ ಗುರು ಶ್ಲೋಕ ವಾಚಿಸಿದರು.