ತೆಂಗು, ಅರಿಶಿಣ ಬೆಳೆಯ ಬೇಸಾಯ ಪದ್ಧತಿ ಅರಿವು

| Published : Sep 07 2024, 01:42 AM IST

ಸಾರಾಂಶ

ಕೃಷಿ ಮಹಾವಿದ್ಯಾಲಯ ಚಾಮರಾಜನಗರದ ವಿದ್ಯಾರ್ಥಿಗಳು ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ತೆಂಗು ಮತ್ತು ಅರಿಶಿನ ಬೆಳೆಯ ಬೇಸಾಯ ಪದ್ಧತಿ ಮತ್ತು ಕೀಟರೋಗ ನಿರ್ವಹಣೆಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ವಿದ್ಯಾರ್ಥಿಗಳಿಂದ ಮಾಹಿತಿ । ಬೆಳೆಗಳ ರೋಗ ಮತ್ತು ಕೀಟ ನಿರ್ವಹಣೆ ಕುರಿತು ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಚಾಮರಾನಗರ

ಕೃಷಿ ಮಹಾವಿದ್ಯಾಲಯ ಚಾಮರಾಜನಗರದ ವಿದ್ಯಾರ್ಥಿಗಳು ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ತೆಂಗು ಮತ್ತು ಅರಿಶಿನ ಬೆಳೆಯ ಬೇಸಾಯ ಪದ್ಧತಿ ಮತ್ತು ಕೀಟರೋಗ ನಿರ್ವಹಣೆಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೀರ್ತಿ ತೆಂಗಿನ ಬೆಳೆಯ ಬೇಸಾಯ ಪದ್ಧತಿ ಬಗ್ಗೆ ಹಾಗೂ ಅಶ್ವಿನಿ ರೋಗ ಮತ್ತು ಕೀಟಗಳ ನಿರ್ವಹಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ತೆಂಗು ಬೆಳೆಯ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳು ನೀಡಿದರು. ಹಾಗೆಯೇ ಅರಿಶಿಣ ಬೆಳೆಯ ಬೇಸಾಯ ಪದ್ಧತಿಯನ್ನು ರಕ್ಷಿತಾ ಹಾಗೂ ಕೀಟ ಮತ್ತು ರೋಗದ ಬಗ್ಗೆ ಅನನ್ಯ ತಿಳಿಸಿಕೊಟ್ಟರು. ರೈತರು ಬೆಳೆಯಲ್ಲಿ ತಾವು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿಜ್ಞಾನಿಗಳೊಂದಿಗೆ ಗುಂಪು ಚರ್ಚೆ ಮಾಡುವುದರೊಂದಿಗೆ ಪರಿಹಾರವನ್ನು ಕಂಡುಕೊಂಡರು. ಅದರಲ್ಲಿ ಪ್ರಮುಖವಾಗಿ ರೋಗ ಮತ್ತು ಕೀಟ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡರು.

ಅರಿಶಿನ ಬೆಳೆಯಲ್ಲಿ ಗೆಡ್ಡೆ ಉಪಚಾರ ಮತ್ತು ತೆಂಗಿನಲ್ಲಿ ಕಾಂಡ ಸೋರುವ ರೋಗ ಹಾಗೂ ಕಪ್ಪು ತಲೆ ಕಂಬಳಿ ಹುಳುವಿನ ಹೆಚ್ಚಿನ ಹೆಚ್ಚಿನ ಬಾಧೆಯಿಂದ ರೈತರು ಎದುರಿಸುತ್ತಿರುವ ನಷ್ಟದ ಬಗ್ಗೆ ರೈತರು ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಇನ್ನು ತೆಂಗಿನ ತೋಟದಲ್ಲಿ ಇರುವೆಗಳ ಹಾನಿಯನ್ನು ತಡೆಗಟ್ಟಲು ಗೋಣಿಚೀಲದಿಂದ ಮಣ್ಣನ್ನು ತೆಗೆಯಬೇಕು ಹಾಗೂ ಕೆಲವು ರಾಸಾಯನಿಕಗಳಾದ ಕ್ಲೋರೋಪ್ಲೈರಿಪಾಸ್ ಮುಂತಾದವುಗಳನ್ನು ಬಳಸಬೇಕೆಂದು ತಜ್ಞರು ಸಲಹೆ ನೀಡಿದರು.

ತಜ್ಞರು ರಾಸಾಯನಿಕಗಳನ್ನು ಹೊರತುಪಡಿಸಿ ಹಸಿರೆಲೆ ಗೊಬ್ಬರಗಳು ಬೇವಿನ ಎಣ್ಣೆ ಹಾಗೂ ಬೆಳೆಗೆ ಹೊದಿಕೆಯ ಮೂಲಕ ಸಸ್ಯ ಸಂರಕ್ಷಣೆಯನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಬೀಜೋಪಚಾರದ ಮೂಲಕ ಅನೇಕ ರೋಗ ಮತ್ತು ಕೀಟ ಬಾಧೆಯನ್ನು ತಡೆಗಟ್ಟಬಹುದು. ಇದು ಕಡಿಮೆ ವೆಚ್ಚದ ಬೇಸಾಯ ಕ್ರಮವೆಂದು ತಜ್ಞರು ರೈತರಿಗೆ ತಿಳಿಸಿದರು. ಈ ಕಾರ್ಯಕ್ರಮದಿಂದ ಅನೇಕ ರೈತರು ತಮ್ಮ ಬೆಳೆಗೆ ಪರಿಹಾರವನ್ನು ಕಂಡುಕೊಂಡರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಡಾಕ್ಟರ್ ಮೋಹನ್ ಕುಮಾರ್ ಎ.ಬಿ., ಡಾ.ಪಂಪನಗೌಡ ಹಾಗೂ ಡಾಕ್ಟರ್ ಮಮತಾ ಖಂಡಪ್ಪಗೊಳ ಹಾಜರಿದ್ದರು.