ಸಾರಾಂಶ
ಎಡಪದವು ರಾಧಾಕೃಷ್ಣ ತಂತಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಯುಗಪುರುಷದ ಸಂಸ್ಥಾಪಕ ದಿ.ಕೊ.ಅ. ಉಡುಪರು ಆದರ್ಶ ಕೃಷಿಕರಾಗಿ, ಉತ್ತಮ ಗುರುಗಳಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಅಜಾತಶತ್ರುವಾಗಿದ್ದರು. ಅವರ ಸಾಧನೆಗಳು ಕಾಲಕಾಲಕ್ಕೂ ಪ್ರಸ್ತುತವಾಗಿರುತ್ತದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿಯ ಯುಗಪುರುಷದ ಸಂಸ್ಥಾಪಕ ದಿ. ಕೊ. ಅ. ಉಡುಪ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಳೆಪಾಡಿ ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ರವರಿಗೆ ಕೊ.ಅ. ಉಡುಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಎಡಪದವು ರಾಧಾಕೃಷ್ಣ ತಂತಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಎಂ.ವಿ.ಭಟ್ ರಚಿತ ‘ಆಧುನಿಕ ಭಾರತ’ ಕೃತಿಯನ್ನು ದ.ಕ.ಜಿಲ್ಲಾ ಕ ಸಾ ಪ ಅಧ್ಯಕ್ಷ ಶ್ರೀನಾಥ ಎಂ.ಪಿ. ಬಿಡುಗಡೆಗೊಳಿಸಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಉದ್ಯಮಿ ಶ್ರೀಪತಿ ಭಟ್, ವಿರಾರ್ ಶಂಕರ್ ಶೆಟ್ಟಿ ಬಿಜೆಪಿ ನಾಯಕರಾದ ಕೆ.ಪಿ. ಸುದರ್ಶನ್, ಕಸ್ತೂರಿ ಪಂಜ, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಪೃಥ್ವಿರಾಜ ಆಚಾರ್ಯ, ಬಾಲಕೃಷ್ಣ ಉಡುಪ ಉದ್ಯಮಿ.ಸುಧಾಕರ ಆಳ್ವ, ಅಂಚೆಪಾಲಕ ಶ್ರೀನಾಥ್ ಬನ್ನೂರು, ಡಾ. ನಯನಾಭಿರಾಮ ಉಡುಪ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಪು. ಗುರುಪ್ರಸಾದ್ ಭಟ್, ಅನುಷಾ ಕರ್ಕೇರಾ ಸನ್ಮಾನ ಪತ್ರ ವಾಚಿಸಿದರು. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಪತ್ರಕರ್ತ ಶರತ್ ಶೆಟ್ಟಿ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆಯ ಸಹಕಾರದೊಂದಿಗೆ ಶ್ರೀ ವಿನಾಯಕ ಯಕ್ಷ ಕಲಾ ತಂಡ ಕೆರೆಕಾಡು ಮೂಲ್ಕಿ ಇವರಿಂದ ಅಭಿಮನ್ಯು ಕಾಳಗ, ರಕ್ತರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನ ಜರುಗಿತು.