ಶತಮಾನೋತ್ಸವದ ಸಂಭ್ರಮದಲ್ಲಿರುವ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ‘ಶತ ಸಂಭ್ರಮ’ದ ಅಂಗವಾಗಿ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ

ಮಡಿಕೇರಿ: ವಿದ್ಯಾರ್ಥಿ ಜೀವನದ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಆಗಬೇಕಾದರೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದೆ. ಒಬ್ಬ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಯನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ. ಆದ್ದರಿಂದ ಶಿಕ್ಷಕರು ತಮ್ಮ ವೃತ್ತಿಯೊಂದಿಗೆ ವಿದ್ಯಾರ್ಥಿಗಳನ್ನು ಸದಾ ಪ್ರೋತ್ಸಾಯಿಸಬೇಕೆಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ಮಿಲನ ಭರತ್ ಹೇಳಿದರು.ಶತಮಾನೋತ್ಸವದ ಸಂಭ್ರಮದಲ್ಲಿರುವ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ‘ಶತ ಸಂಭ್ರಮ’ದ ಅಂಗವಾಗಿ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮಲ್ಲಿರುವ ಸೃಜನಾತ್ಮಕ ಕಲೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಿರಂತರವಾಗಿ ನಾವು ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ಎಲ್ಲರೂ ಒಗ್ಗೂಡಲು ಸಾಧ್ಯ ಎಂದು ಹೇಳಿದರು.ಇಂದಿನ ವಿದ್ಯಾಭ್ಯಾಸ ಮಾಡಿದ ಸುಮಾರು 80ರಷ್ಟು ಮಂದಿ ಉದ್ಯೋಗ ಪಡೆಯಲು ಅರ್ಹರಲ್ಲ. ಆದ್ದರಿಂದ ಪಠ್ಯ ಮಾತ್ರವಲ್ಲದೇ ಇತರೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಸಹಕಾರಿಯಾಗುತ್ತದೆ ಎಂದರು. ಒಬ್ಬ ಶಿಕ್ಷಕ ರಾಷ್ಟಪತಿ, ವಿಜ್ಞಾನಿಯನ್ನು ಕೂಡ ಸೃಷ್ಟಿಸುತ್ತಾರೆ. ಆದ್ದರಿಂದ ಹಲವಾರು ರತ್ನಗಳು ಶಿಕ್ಷಕರಿಂದ ರೂಪುಗೊಳ್ಳಲಿ ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರು ಪ್ರಸಾದ್ ಬಂಗೇರ ಮಾತನಾಡಿ, ಶಿಕ್ಷಕರಿಗೆ ಆರ್ಥಿಕ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಿದವರಿಗೆ ಧನ್ಯವಾದ ಸಲ್ಲಿಸಬೇಕಾಗಿದೆ. ರಾಜ್ಯದಲ್ಲಿ ಸುಮಾರು 6700 ಸೌಹಾರ್ದ ಸಹಕಾರಿಯ ಸಂಸ್ಥೆಗಳಿದೆ. ಮೈಸೂರು ಭಾಗದಲ್ಲಿ 612 ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಪ್ರಾರಂಭದ 50 ಸಂಸ್ಥೆಗಳಲ್ಲಿ ಕೊಡಗು ವಿದ್ಯಾ ನೌಕರರ ಸಂಘ ಪತ್ತಿನ ಸೌಹಾರ್ದ ಸಂಘ ಒಂದಾಗಿದ್ದು, ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು. ಕಲಬುರಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ್ ಮಾತನಾಡಿ ಕೊಡಗು ಸೌಹಾರ್ದ ಸಹಕಾರಿ ಸಹಕಾರ ಸಂಸ್ಥೆ ಹಳೆಯದಾದ ಸಂಸ್ಥೆಯಾಗಿದ್ದು, ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಎಚ್.ಎಸ್.ಚೇತನ್ ಮಾತನಾಡಿ ಸಂಘ, ವಿದ್ಯಾ ಇಲಾಖೆಯ ನೌಕರರಿಗೆ ಹತ್ತು ಹಲವು ಸಹಕಾರ ಸಹಾಯ ಒದಗಿಸುತ್ತಿದೆ. ಸ್ವಂತ ಕಟ್ಟಡ, ಬಾಡಿಗೆಗೆ ಕೊಟ್ಟಿರುವ ಮಳಿಗೆ ಹಾಗೂ ಗುರು ಸದನವೆಂಬ ಗೆಸ್ಟ್ ಹೌಸ್ ಅನ್ನು ಕೂಡಾ ನಡೆಸುತ್ತಿದೆ. ಆರ್ಥಿಕ ಸಲಭಲತೆ ಹೊಂದಿದೆ ಎಂದು ತಿಳಿಸಿದರು.

ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಮಾತನಾಡಿದರು. ಮಡಿಕೇರಿ ಸರ್ಕಾರಿ ಶಾಲೆಯ ಎಸ್ ಎಡಿಎಂಸಿ ಅಧ್ಯಕ್ಷ ಎನ್.ಎಂ. ಜಗದೀಶ್, ಸಂಘದ ಮಾಜಿ ಅಧ್ಯಕ್ಷ ಕಾಳಪ್ಪ, ಉಪಾಧ್ಯಕ್ಷ ಮುತ್ತಪ್ಪ, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನ, ಸಂಘದ ಅಧಿಕಾರಿ ಸುರೇಶ್,‌ ಸಿಇಓ ನಟೇಶ್, ಸದಸ್ಯ ಮೋಹನ್, ತೀರ್ಪುಗಾರರಾದ ಮೇಘಾ ಸುಜಯ್, ಸೌಜನ್ಯ, ಪ್ರಮುಖರಾದ ವಿಲ್ಫ್ರೆಡ್, ಪ್ರಭು, ರೇವತಿ ಮತ್ತಿತರರು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿ ಲಿಖಿತ ಶಿವತಾಂಡವ ನೃತ್ಯ ಮಾಡಿದರು. ಕಾರ್ಯಕ್ರಮದ ನಂತರ ಸಂಘದ ಸದಸ್ಯರಿಗೆ ಪ್ರಬಂಧ ಸ್ಪರ್ಧೆ, ಏಕಪಾತ್ರಾಭಿನಯ, ಸಂಗೀತ, ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳು ಜರುಗಿತು. ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಸದಸ್ಯರು ಸಂಭ್ರಮಿಸಿದರು. ತೇಲಪಂಡ ಕಾರ್ಯಪ್ಪ, ಪಟ್ಟಡ ಉತ್ತಪ್ಪ ಸೇರಿದಂತೆ ಪ್ರಮುಖರು ನಮ್ಮ ಸಂಘಕ್ಕೆ ಅಡಿಪಾಯ ಹಾಕಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡುವಲ್ಲಿ ಈ ಸಂಘವನ್ನು ಸ್ಥಾಪಿಸಿದ್ದಾರೆ. ಈ ಸಂಘ ಇಂದು ಶತಮಾನೋತ್ಸವವನ್ನು ಪೂರೈಸಿ ಸಂಘದ ಸದಸ್ಯರ ಹಲವು ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ಜ.11ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಸಚಿವರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ.

- ಎಚ್.ಎಸ್.ಚೇತನ್, ಅಧ್ಯಕ್ಷರು ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ