ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ನಾಗರಹೊಳೆ ಸಂರಕ್ಷಕರಾಗಿ ಖ್ಯಾತಿ ಪಡೆದಿದ್ದ ಕೆ.ಎಂ.ಚಿಣ್ಣಪ್ಪ ಅಂತ್ಯಕ್ರಿಯೆ ಮಂಗಳವಾರ ಕೊಡವ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಾಗರಹೊಳೆ ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ನೆರವೇರಿತು. ಪುತ್ರ ಮನು ಅಂತಿಮ ಕ್ರಿಯೆ ನೆರವೇರಿಸಿದರು. ಅರಣ್ಯ ಇಲಾಖೆಯ ಡಿ.ಸಿ.ಎಫ್. ಭಾಸ್ಕರ್, ಡಿಸಿಎಫ್ ಶರಣ ಬಸಪ್ಪ, ಸಿಎಎಫ್ ಹರ್ಷ ನರಗುಂದ, ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿ ಚಿಣ್ಣಪ್ಪ ಅವರ ಅಂತಿಮ ದರ್ಶನ ಮಾಡಿದರು. ಪರಿಸರ ಸಂಘಟನೆಗಳ ಪ್ರಮುಖರಾದ ಡಾ. ಉಲ್ಲಾಸ್ ಕಾರಂತ್, ಡಾ. ಸಾಂಭಕುಮಾರ್, ಹೆಸರಾಂತ ಸಾಕ್ಷ್ಯ ಚಿತ್ರ ನಿರ್ದೇಶಕ ಶೇಖರ್ ದತ್ತಾತ್ರಿ, ಪ್ರವೀಣ್ ಭಾರ್ಗವ್, ಕೖಪಾಕರ ಸೇನಾನಿ, ಬಿ.ಭಾಸ್ಕರ್ ರಾವ್, ವೈಲ್ಡ್ ಲೈಫ್ ಫಸ್ಟ್ ನ ತಮ್ಮುಪೂವಯ್ಯ, ಪಿ.ಎಂ.ಮುತ್ತಣ್ಣ, ಸತೀಶ್ ಅಪ್ಪಚ್ಚು, ಪ್ರಮೋದ್ ಸೋಮಯ್ಯ, ಕೊಟ್ರಂಗಡ ಸುಬ್ರಹ್ಮಣಿ, ಕಟ್ಟೇರ ಜಾಜಿ, ಪುಟ್ಟು ಚಿಟ್ಟಿಯಪ್ಪ ಮತ್ತಿತರರು ಅಂತಿಮ ದರ್ಶನ ಪಡೆದರು.
...........ನಿವೃತ್ತ ಅರಣ್ಯ ಅಧಿಕಾರಿ ಹಾಗೂ ಪರಿಸರ ಪ್ರೇಮಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಸರ ಪ್ರಶಸ್ತಿ ಪಡೆದ ಕೊಟ್ರಂಗಡ ಚಿಣ್ಣಪ್ಪ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ನಾಗರಹೊಳೆ ಸೇರಿದಂತೆ ಭಾರತದ ಕಾಡುಗಳ ಬಗ್ಗೆ ಚಿಣ್ಣಪ್ಪ ಅಪೂರ್ವ ಮಾಹಿತಿಯನ್ನು ಹೊಂದಿದ್ದರು. ಅರಣ್ಯ ವಿಚಾರದಲ್ಲಿ ನಡೆದಾಡುವ ಕೋಶದಂತೆ ಅವರು ಜೀವಿಸಿದ್ದರು.84 ವರ್ಷದ ಕೆ.ಎಂ.ಚಿಣ್ಣಪ್ಪ ಕೆಲಕಾಲದ ಅನೋರೋಗ್ಯದ ಬಳಿಕ ಸೋಮವಾರ ಮಧ್ಯಾಹ್ನ 11.20 ಗಂಟೆಗೆ ಕೊನೆಯುಸಿರೆಳೆದರು. ಮಂಗಳವಾರ ಪೊನ್ನಂಪೇಟೆ ತಾಲೂಕಿನ ಕಾಕೂರು ಗ್ರಾಮದ ಸ್ವಗೃಹದಲ್ಲಿ ಚಿಣ್ಣಪ್ಪ ಅಂತ್ಯಕ್ರಿಯೆ ನೆರವೇರಲಿದೆ.ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗ ಹಾಗೂ ಪರಿಸರ ಪ್ರೇಮಿಗಳನ್ನು ಬಿಟ್ಟು ಅಗಲಿದ್ದಾರೆ. ಕಾಡಿನ ಸಂರಕ್ಷಣೆಗಾಗಿ ಅನೇಕ ಪ್ರಶಸ್ತಿಗಳು ಸಂದಿದ್ದವು.ಕೆಲವು ವರ್ಷಗಳ ಹಿಂದೆ ದುಷ್ಕರ್ಮಿಗಳು ನಾಗರಹೊಳೆಗೆ ಬೆಂಕಿಯಿಟ್ಟಿದ್ದಾಗ ಚಿಣ್ಣಪ್ಪ ಕಾಡು ರಕ್ಷಣೆಗೆ ಜೀವಪಣವಾಗಿಟ್ಟು ಹೋರಾಡಿದ್ದರು. ನಾಗರಹೊಳೆ ಅರಣ್ಯಾಧಿಕಾರಿಯಾಗಿಯೂ ಚಿಣ್ಣಪ್ಪ ಕರ್ತವ್ಯ ಸ್ಮರಣೀಯ.1941ರಲ್ಲಿ ದಕ್ಷಿಣ ಕೊಡಗಿನ ಕುಮಟೂರು ಗ್ರಾಮದಲ್ಲಿ ಸಶಸ್ತ್ರ ಪಡೆಗಳ ಕುಟುಂಬದಲ್ಲಿ ಜನಿಸಿದ ಕೊಟ್ರಂಗಡ ಎಂ.ಚಿನ್ನಪ್ಪ ಅವರು ಅತ್ಯುನ್ನತ ವನ್ಯಜೀವಿ ರಕ್ಷಕರಾಗಿದ್ದಾರೆ. ನಿಜವಾದ ಮಣ್ಣಿನ ಮಗ, ತಂದೆ ಸೈನಿಕರಾಗಿದ್ದರು. ನಿವೃತ್ತಿಯ ನಂತರ ಕೃಷಿಯನ್ನು ಮಾಡಿದರು. ಚಿನ್ನಪ್ಪ 1967 ರಲ್ಲಿ ಕರ್ನಾಟಕ ಅರಣ್ಯ ಇಲಾಖೆಗೆ ಅರಣ್ಯಾಧಿಕಾರಿಯಾಗಿ ಸೇರಿದರು ಮತ್ತು ತಮ್ಮ ಜೀವನದುದ್ದಕ್ಕೂ ಮುಂಚೂಣಿ ಯೋಧರಾಗಿದ್ದರು. ಅವರ ವೃತ್ತಿಜೀವನದ ಬಹುಪಾಲು ಅವರು ನಾಗರಹೊಳೆಯಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿದರು.ಚಿಣ್ಣಪ್ಪ ಅವರು ನಾಗರಹೊಳೆಯಲ್ಲಿ ರೇಂಜರ್ ಆಗಿ ಸೇರಿದಾಗ, ಈ ಪ್ರದೇಶವು ಮರದ ಕಳ್ಳಸಾಗಣೆ, ಗಾಂಜಾ ತೋಟ, ಬೇಟೆಯಾಡುವುದು, ದನ ಮೇಯಿಸುವಿಕೆ, ಅಭಯಾರಣ್ಯದಲ್ಲಿ ಅನಧಿಕೃತ ಸಾರಾಯಿ ಸ್ಥಾಪನೆಯಂತಹ ಹಲವಾರು ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ಕೆಲಸ ಮಾಡಿದ್ದರು.ಇವರ ಸೇವೆಯನ್ನು ಪರಿಗಣಿಸಿದ ಸರ್ಕಾರ 1985ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಿತ್ತು. ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷರಾಗಿ ಅರಣ್ಯಕ್ಕೆ ಸಂಬಂಧಿಸಿದ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಮಕ್ಕಳನ್ನು ಸೇರಿಸಿಕೊಂಡು ಹಮ್ಮಿಕೊಂಡಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಿತರಾಗಿ ತರಬೇತಿಯ ಮೂಲಕ ಕಾಡಿನ ಸಂರಕ್ಷಣೆಯ ಕುರಿತು ಅರಿವನ್ನು ಮೂಡಿಸುತ್ತಿದ್ದರು.