ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಯಾವುದೇ ಜನಾಂಗ ಭೌತಿಕವಾಗಿ ಅಭಿವೃದ್ಧಿ ಹೊಂದುವುದಕ್ಕಿಂತಲೂ ಚಾರಿತ್ರಿಕವಾಗಿ ಅಭಿವೃದ್ಧಿ ಹೊಂದುವ ಬಗ್ಗೆ ಗಮನಹರಿಸಬೇಕು. ಚಾರಿತ್ರಿಕವಾಗಿ ಅಭಿವೃದ್ಧಿ ಹೊಂದಿದಾಗ ಮುಂದಿನ ತಲೆಮಾರು ಸುಸಂಸ್ಕೃತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಭಿಪ್ರಾಯ ಪಟ್ಟರು.ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೈಲ್ ಮುಹೂರ್ತ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿ ಗೌಡ ಜನಾಂಗಕ್ಕೆ ವಿಶಿಷ್ಟವಾದ ಭಾಷೆ ಇರುವುದೇ ಹೆಮ್ಮೆ. ಅಂತಹ ಭಾಷೆಯನ್ನು ಉಳಿಸಿ ಬೆಳೆಸಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವ ಅವಶ್ಯಕತೆ ಇದೆ ಎಂದರು.
ಮತ್ತೋರ್ವ ಅತಿಥಿ ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ದಯಾನಂದ ಮಾತನಾಡಿ, ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಮುಹೂರ್ತವನ್ನು ಕೊಡಗಿನ ಹೊರಗಡೆ ನೆಲೆಸಿರುವ ಗೌಡ ಸಮಾಜದವರು ಆಚರಿಸಿಕೊಂಡು ಬರುವುದರಿಂದ ಸಮುದಾಯದ ಜನರಲ್ಲಿ ಬಾಂಧವ್ಯ ಬೆಳೆಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ 1970ರಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗ ಮೈಸೂರಿನಲ್ಲಿ ಕೈಲ್ ಮುಹೂರ್ತವನ್ನು ಆಚರಿಸಿದ್ದೆವು ಎಂದು ಸ್ಮರಿಸಿದರು. ಗೌಡ ಸಮಾಜದ ಹಿರಿಯರು ಬೇರೆ ಬೇರೆ ಊರುಗಳಲ್ಲಿ ಸಮಾಜ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ಅದರ ಸದುಪಯೋಗವನ್ನು ಜನಾಂಗಬಾಂಧವರು ಪಡೆದುಕೊಳ್ಳಬೇಕು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕುಂಬಾರನ ಬಸಪ್ಪ ವಹಿಸಿ ಮಾತನಾಡಿ, ಮೈಸೂರು ಕೊಡಗು ಗೌಡ ಸಮಾಜದ ಏಳಿಗೆಗೆ ಸಹಕರಿಸಿದವರನ್ನು ಸ್ಮರಿಸಿದರು. ಮುಂದಕ್ಕೂ ಸಮಾಜದ ಬೆಳವಣಿಗೆಯಲ್ಲಿ ಸಮುದಾಯದ ಸಹಕಾರವನ್ನು ಕೋರಿದರು. ಸ್ಥಳೀಯ ನಗರಪಾಲಿಕೆ ಮಾಜಿ ಸದಸ್ಯ ಕೆ. ವಿ. ಶ್ರೀಧರ ಮಾತನಾಡಿ ಕೊಡಗು ಗೌಡ ಜನಾಂಗದವರು ಯಾವತ್ತು ಒಳ್ಳೆಯ ಆಚಾರ ವಿಚಾರ ನಡೆನುಡಿಗಳನ್ನು ಅನುಸರಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.
ಸಮಾರಂಭದಲ್ಲಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಲಾಯಿತು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಶೂಟರ್ ಕಾನಡ್ಕ ಧನ್ವಿ ಹನೀಷ್ ಮತ್ತು ಹಾಕಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕುಂಭ ಗೌಡನ ವಿಶ್ವಜಿತ್ ವಿನೋದ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಕುದುಪಜೆ ಚಂದ್ರಶೇಖರ್, ಖಜಾಂಚಿ ನಡುವಟ್ಟೀರ ಲಕ್ಷ್ಮಣ, ನಿರ್ದೇಶಕರಾದ ಹೊಸೂರು ರಾಘವ, ಪಾಣತ್ತಲೆ ವಸಂತ, ಕೊಂಬಾರನ ಸುಬ್ಬಯ್ಯ, ಕುಂಟುಪಣಿ ರಮೇಶ್, ತೋಟಂಬೈಲು ಇಂದಿರಾ , ಚಪ್ಪೇರ ಯಮುನಾ, ಕುಂಟುಪಣಿ ಶೀಲಾ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು.ಕಾರ್ಯಕ್ರಮಕ್ಕೂ ಮೊದಲು ಕೊಡಗಿನ ಸಂಪ್ರದಾಯದಂತೆ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪೊನ್ನೇಟಿ ನಂದ ಸ್ವಾಗತಿಸಿದರು. ಸಹ ಕಾರ್ಯದರ್ಶಿ ನಡುಮನೆ ಚಂಗಪ್ಪ ವಂದಿಸಿದರು.