ಬೆಟ್ಟದಪುರದಲ್ಲಿ ಕೊಲೆ ಆದ ಮಹಿಳೆ ಕುಶಾಲನಗರದಲ್ಲಿ ಪ್ರತ್ಯಕ್ಷವಾದಳು -ಡಿಎನ್‌ಎ ವರದಿ ನಿರ್ಲಕ್ಷಿಸಿ ಪೊಲೀಸರ ಎಡವಟ್ಟು

| N/A | Published : Apr 03 2025, 11:31 AM IST

KSRP
ಬೆಟ್ಟದಪುರದಲ್ಲಿ ಕೊಲೆ ಆದ ಮಹಿಳೆ ಕುಶಾಲನಗರದಲ್ಲಿ ಪ್ರತ್ಯಕ್ಷವಾದಳು -ಡಿಎನ್‌ಎ ವರದಿ ನಿರ್ಲಕ್ಷಿಸಿ ಪೊಲೀಸರ ಎಡವಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ಪತಿಯಿಂದ ಕೊಲೆಯಾಗಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ 4 ವರ್ಷಗಳ ನಂತರ ಪ್ರತ್ಯಕ್ಷವಾಗಿರುವ ಕುತೂಹಲಕಾರಿ ಪ್ರಕರಣ ಜರುಗಿದೆ.

ಮೈಸೂರು : ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ಪತಿಯಿಂದ ಕೊಲೆಯಾಗಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ 4 ವರ್ಷಗಳ ನಂತರ ಪ್ರತ್ಯಕ್ಷವಾಗಿರುವ ಕುತೂಹಲಕಾರಿ ಪ್ರಕರಣ ಜರುಗಿದೆ.

2020ರ ಅಕ್ಟೋಬರ್‌ 30ರಂದು ತನ್ನ ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿ, ಶವವನ್ನು ಪೊದೆಯಲ್ಲಿ ಮುಚ್ಚಿಟ್ಟು ಸಾಕ್ಷ್ಯ ನಾಶಪಡಿಸಿದ್ದಾನೆ ಎಂದು ಆರೋಪಿಸಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿ ಬೆಟ್ಟದಪುರ ಪೊಲೀಸರು, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಹೊಸ ಬಡಾವಣೆ ನಿವಾಸಿ ಸುರೇಶ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ವೇಳೆ, ಸಿಕ್ಕಿದ್ದ ಮಹಿಳೆಯೊಬ್ಬಳ ಶವದ ಗುರುತಿನ ಆಧಾರದ ಮೇಲೆ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದರು. ಆದರೆ, ಶವದ ಡಿಎನ್ಎ ಮತ್ತು ಮಲ್ಲಿಗೆಯ ಸಂಬಂಧಿಕರ ಡಿಎನ್ಎ ತಾಳೆಯಾಗುವುದಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದ್ದರೂ, ಪೊಲೀಸರು ಅದನ್ನು ನಿರ್ಲಕ್ಷಿಸಿದ್ದರು.

ಈ ಪ್ರಕರಣದ ವಿಚಾರಣೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈಗಾಗಲೇ 9 ಜನ ಸಾಕ್ಷೀದಾರರ ವಿಚಾರಣೆಯೂ ಆಗಿತ್ತು. ಏಪ್ರಿಲ್ 7ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿತ್ತು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ ‘ನಾನು ನನ್ನ ಪತ್ನಿಯನ್ನು ಕೊಂದಿಲ್ಲ. ಆಕೆ ಬದುಕಿದ್ದಾಳೆ’ ಎಂದು ಆರೋಪಿ ಸುರೇಶ್ ಪದೇ ಪದೇ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದ. ಅಷ್ಟೇ ಅಲ್ಲದೆ ‘ನಮ್ಮ ತಾಯಿ ಬದುಕಿದ್ದಾಳೆ’ ಎಂದು ಆಕೆಯ ಮಕ್ಕಳು, ಅಕ್ಕಪಕ್ಕದ ಮನೆಯವರೂ ಸಾಕ್ಷ್ಯ ನುಡಿದಿದ್ದರು.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಮಲ್ಲಿಗೆ ಕುಶಾಲನಗರದಲ್ಲಿ ಪತ್ತೆಯಾಗಿದ್ದಾಳೆ. ಆಕೆ ಮಲ್ಲಿಗೆಯೇ ಹೌದು ಎಂದು ಖಚಿತಪಡಿಸಿಕೊಂಡು, ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ನ್ಯಾಯಾಧೀಶ ಗುರುರಾಜ್ ಸೋಮಕ್ಕಲವರ್ ಅವರು ಮಲ್ಲಿಗೆಯನ್ನು ತಕ್ಷಣವೇ ನ್ಯಾಯಾಲಯಕ್ಕೆ ಹಾಜರುಪಡಿಸಲು ಬೆಟ್ಟದಪುರ ಪೊಲೀಸರಿಗೆ ನಿರ್ದೇಶಿಸಿದ್ದಾರೆ.