ಚೊಚ್ಚಲ ಪರೀಕ್ಷೆಗೆ ಸಜ್ಜಾದ ಕೊಡಗು ವಿಶ್ವವಿದ್ಯಾನಿಲಯ

| Published : Jan 13 2024, 01:31 AM IST

ಸಾರಾಂಶ

ಜಿಲ್ಲೆಯ 22 ಪದವಿ ಕಾಲೇಜುಗಳ ಸುಮಾರು 2200 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಜ.25ರಿಂದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಗಳು ಪ್ರಾರಂಭವಾಗಲಿದೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ

ನೂತನವಾಗಿ ಆರಂಭಗೊಂಡಿರುವ ಕೊಡಗು ವಿಶ್ವ ವಿದ್ಯಾನಿಲಯವು ಚೊಚ್ಚಲ ಪರೀಕ್ಷೆಗೆ ಸಜ್ಜಾಗಿದೆ. ಜ.25ರಿಂದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಜಿಲ್ಲೆಯ 22 ಪದವಿ ಕಾಲೇಜುಗಳ ಸುಮಾರು 2200 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.

ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ 2023ರ ಮಾ.28ರಂದು ಅಧಿಕೃತವಾಗಿ ಉದ್ಘಾಟನೆ ಮಾಡಿತ್ತು. ಪ್ರಥಮ ಕುಲಪತಿಗಳಾಗಿ ಪ್ರೊ. ಅಶೋಕ ಸಂ. ಆಲೂರ ಹಾಗೂ ಡಾ. ಸೀನಪ್ಪ ಮಾ.29 ರಂದು ಕುಲಸಚಿವರಾಗಿ(ಮೌಲ್ಯಮಾಪನ) ಅಧಿಕಾರ ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ. ರಾಜ್ಯಪಾಲ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಥ್‌ ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿದ್ದರು. ವಿ.ವಿ.ಗೆ ಯುಜಿಸಿಯಿಂದ ಮಾನ್ಯತೆ ಕೂಡ ದೊರಕಿತ್ತು.

ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಶಿಕ್ಷಣ ನೀತಿ - 2020 ರ ಆಧಾರಿತ ಸ್ನಾತಕ ಪದವಿ ಕಾರ್ಯಕ್ರಮಗಳ ಪ್ರಥಮ ಸೆಮಿಸ್ಟರ್‌ನ ಲಿಖಿತ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ. ಬೋರ್ಡ್ ಆಫ್ ಎಕ್ಸಾಮಿನೇಷನ್ (ಬಿಒಇ) ಮೂಲಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಲಾಗಿದೆ.

ಕೊಡಗು ವಿ.ವಿ.ಯ ವ್ಯಾಪ್ತಿಗೆ ಬರುವ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳ ಗಮನಕ್ಕೆ ತರಲಾಗಿದ್ದು, ನೂತನ ಕೊಡಗು ವಿಶ್ವವಿದ್ಯಾಲಯದ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಪದವಿ ಕಾರ್ಯಕ್ರಮಗಳಿಗೆ ಸುಮಾರು 2200 ಸ್ನಾತಕ ಪದವಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದು, ಮೊದಲ ಬಾರಿಗೆ ನಡೆಸುತ್ತಿರುವ ನೂತನ ವಿಶ್ವವಿದ್ಯಾಲಯದ ಚೊಚ್ಚಲ ಸ್ನಾತಕ ಪದವಿ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.

ಪರೀಕ್ಷೆಗೆ ಸಂಬಂಧಿಸಿದಂತೆ ಕೊಡಗು ವಿ.ವಿ.ಯಿಂದ ಈಗಾಗಲೇ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷೆಗಳು ಆಯಾಯ ಕಾಲೇಜುಗಳಲ್ಲಿಯೇ ನಡೆಯಲಿದೆ. ಜಿಲ್ಲೆಯಲ್ಲಿ ನೂತನವಾಗಿ ಆರಂಭವಾಗಿರುವ ಬಿಜಿಎಸ್ ಸಿದ್ದಾಪುರ ಪದವಿ ಕಾಲೇಜು ಹಾಗೂ ನಾಪೋಕ್ಲು ಪದವಿ ಕಾಲೇಜುಗಳಿಗೆ ಪರೀಕ್ಷಾ ಕೇಂದ್ರವನ್ನು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಹಾಗೂ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಿದ್ದು, ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಡಲಾಗಿದೆ.

ವಿಶ್ವ ವಿದ್ಯಾನಿಲಯ ಆರಂಭವಾಗಿ ಇಲ್ಲಿಯ ವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಾರದಿದ್ದರೂ ಕೂಡ ಶೈಕ್ಷಣಿಕ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಪರೀಕ್ಷೆಗೆ ಬಳಕೆ ಮಾಡಿಕೊಳ್ಳುವ ಮೂಲಕ ವಿಶ್ವ ವಿದ್ಯಾನಿಲಯವು ಪರೀಕ್ಷೆ ನಡೆಸುತ್ತಿದೆ. ಕೊಡಗು ವಿಶ್ವ ವಿದ್ಯಾನಿಲಯದ ಅಧೀನದ ಚಿಕ್ಕ ಅಳವಾರ ಜ್ಞಾನ ಕಾವೇರಿ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ವಿವಿಧ ಕೋರ್ಸ್‌ ಗಳಿಗೆ ಈ ಬಾರಿ ಪ್ರವೇಶಾತಿ ಪಡೆದಿದ್ದಾರೆ. ಶೇ.10ರಷ್ಟು ದಾಖಲಾತಿ ಹೆಚ್ಚಳ

ಕೊಡಗು ಜಿಲ್ಲೆಗೆ ಪ್ರತ್ಯೇಕ ವಿ.ವಿ. ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ದೂರದ ಮಂಗಳೂರು, ಮೈಸೂರಿಗೆ ತೆರಳುವುದು ತಪ್ಪಿದೆ. ಈ ಹಿಂದಿನ ಮಂಗಳೂರು ವಿ.ವಿ. ಶೈಕ್ಷಣಿಕ ಪ್ರವೇಶಾತಿ ಹೋಲಿಸಿದರೆ ಕೊಡಗು ವಿ.ವಿ.ಯ ಸ್ನಾತಕ ಪದವಿ ಪ್ರವೇಶಾತಿ ಶೇ.10ರಷ್ಟು ಏರಿಕೆಯಾಗಿದೆ. ಕೊಡಗು ವಿ.ವಿ.ಯ ವೆಬ್ ಸೈಟ್ ಅನ್ನು ಸುಮಾರು 60 ಸಾವಿರ ಮಂದಿ ಸಂದರ್ಶಿಸಿದ್ದಾರೆ. ಕರ್ನಾಟಕ ಸರ್ಕಾರದ ಯುಯುಸಿಎಂಎಸ್ ನ ಬಹುತೇಕ ಎಲ್ಲ ಹಂತವನ್ನು ಕೊಡಗು ವಿ.ವಿ. ಪೂರ್ಣಗೊಳಿಸಿದೆ. ಈಗಾಗಲೇ ಜ್ಞಾನ ಕಾವೇರಿ ಆವರಣದಲ್ಲಿ ಜೋಡಿ ರಸ್ತೆ ಕಾಮಗಾರಿ ಕೂಡ ತ್ವರಿತವಾಗಿ ಸಾಗುತ್ತಿದೆ.

ಪ್ರಥಮ ಸೆಮಿಸ್ಟರ್‌ನ ಲಿಖಿತ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ಮಾಡಲಾಗಿದೆ. 2200 ಸ್ನಾತಕ ಪದವಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದು, ಮೊಟ್ಟಮೊದಲ ಬಾರಿಗೆ ನಡೆಸುತ್ತಿರುವ ನೂತನ ವಿಶ್ವವಿದ್ಯಾಲಯದ ಚೊಚ್ಚಲ ಸ್ನಾತಕ ಪದವಿ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. -ಡಾ. ಸೀನಪ್ಪ, ಕುಲಸಚಿವರು (ಪರೀಕ್ಷಾಂಗ) ಕೊಡಗು ವಿಶ್ವವಿದ್ಯಾಲಯ.