ಕೊಡಗು ವಿಶ್ವವಿದ್ಯಾನಿಲಯ: ವೃತ್ತಿಪರ ಪದವಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನ

| Published : May 03 2024, 01:02 AM IST

ಕೊಡಗು ವಿಶ್ವವಿದ್ಯಾನಿಲಯ: ವೃತ್ತಿಪರ ಪದವಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಅಳುವಾರದ ಕೊಡಗು ವಿ.ವಿ. ಕ್ಯಾಂಪಸ್ಸಿನಲ್ಲಿ ಈ ಸಾಲಿನಿಂದ ಬಹು ಬೇಡಿಕೆಯ ವೃತ್ತಿಪರ ಕೋರ್ಸ್‌ಗಳಾದ ಬಿಸಿಎ, ಎಂಸಿಎ ಮತ್ತು ಎಂಬಿಎ ಪದವಿಗಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೊದಲ ಹಂತದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮೇ ೧೮ರ ತನಕ ಅರ್ಜಿ ಸಲ್ಲಿಸಬಹುದು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣ, ಚಿಕ್ಕ ಅಳುವಾರದಲ್ಲಿ, 2024-25ನೇ ಶೈಕ್ಷಣಿಕ ಸಾಲಿನಿಂದ ಬಹು ಬೇಡಿಕೆಯ ವೃತ್ತಿಪರ ಕೋರ್ಸ್‌ಗಳಾದ ಬಿಸಿಎ, ಎಂಸಿಎ ಮತ್ತು ಎಂಬಿಎ ಪದವಿಗಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೊದಲ ಹಂತದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಲು ಬಯಸುವ ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA in Artificial Intelligence and Machine Learning) ಜನಪ್ರಿಯ ಕೋರ್ಸ್‌ಗಳಲ್ಲಿ ಒಂದಾಗಿದೆ.

ಮೂರು ವರ್ಷಗಳ ಪದವಿ ಕೋರ್ಸ್ ಇದಾಗಿದ್ದು ಆರು ಸೆಮಿಸ್ಟರ್‌ಗಳನ್ನೊಳಗೊಂಡಿದೆ. ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಗಳು, ನೆಟ್‌ವರ್ಕಿಂಗ್, ಡೇಟಾ ರಚನೆ ಮತ್ತು ಪೈಥಾನ್, ‘ಸಿ’, ‘ಸಿ ಪ್ಲಸ್ ಪ್ಲಸ್‌’, ಕ್ಲೌಡ್ ಕಂಪ್ಯೂಟಿಂಗ್ ಮತ್ತು ‘ಜಾವಾ’ ನಂತಹ ಕೋರ್ ಪ್ರೋಗ್ರಾಮಿಂಗ್ ಭಾಷೆಗಳ ಬಗ್ಗೆ ಕಲಿಯುವುದಕ್ಕೆ ಹಾಗೂ ಮಾಹಿತಿ ತಂತ್ರಜ್ಞಾನ ಪರಿಕರಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಪ್ರಾವಿಣ್ಯತೆಯನ್ನು ಹೊಂದಲು ಈ ಕೋರ್ಸ್ ಅನುಕೂಲವಾಗಲಿದೆ.

ಉದ್ಯೋಗಾಧಾರಿತ ವೃತ್ತಿಪರ ಕೋರ್ಸ್‌‌‌ಗಳಲ್ಲೊಂದಾಗಿರುವ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA in Artificial Intelligence and Machine Learning) ಬಹು ಬೇಡಿಕೆಯ ಕೋರ್ಸ್ ಆಗಿದ್ದು, ಈ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿವಿಧ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಕೌಶಲ್ಯಾಭಿವೃದ್ಧಿ ತರಬೇತಿಯ ಜೊತೆಗೆ ಕ್ಯಾಂಪಸ್ ಆಯ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಕೊಡಗು ಜಿಲ್ಲೆಯ ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿನಿಂದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (BCA in Artificial Intelligence and Machine Learning) ಪದವಿ ವ್ಯಾಸಂಗ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಎರಡನೇ ಹಂತದಲ್ಲಿ ವೃತ್ತಿಪರ ಸ್ನಾತಕೋತ್ತರ ಕೋರ್ಸ್‌‌ಗಳಾದ ಎಂಬಿಎ ಮತ್ತು ಎಂಸಿಎ ಪ್ರವೇಶಾತಿಗಳ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲೇ ಮೊದಲ ಬಾರಿಗೆ ಇಂತಹ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸುತ್ತಿರುವ ಹೆಗ್ಗಳಿಕೆಗೆ ನೂತನ ಕೊಡಗು ವಿಶ್ವವಿದ್ಯಾಲಯವು ಪಾತ್ರವಾಗುತ್ತಿದೆ ಎಂದು ಕುಲಸಚಿವ ಡಾ.ಸೀನಪ್ಪ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಮೇ 3ರಿಂದ ಮೇ 18ರ ತನಕ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಅನ್ನು ಸಂದರ್ಶಿಸಬಹುದು (ಮೊ: 8861774778).