ಕೊಡಗು ವಿಶ್ವವಿದ್ಯಾನಿಲಯ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಗೀತೋತ್ಸವ ಸಮಾರಂಭ

| Published : Nov 30 2024, 12:49 AM IST

ಸಾರಾಂಶ

ಕೊಡಗು ವಿಶ್ವವಿದ್ಯಾಲಯ, ಕನ್ನಡ ಜಾನಪದ ಪರಿಷತ್ತು ಆಶ್ರಯದಲ್ಲಿ ಕೊಡಗು ವಿ.ವಿ.ಯಲ್ಲಿ ‘ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಗೀತೋತ್ಸವ’ ಸಮಾರಂಭ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಮನುಷ್ಯನ ಬದುಕಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಇತಿಹಾಸದ ಸಂಗತಿಗಳನ್ನು ಒಳಗೊಂಡ ಪ್ರಜ್ಞೆಯ ಸೃಷ್ಟಿಯೇ ಜಾನಪದವಾಗಿದೆ. ಅದರಲ್ಲಿನ ವಿವೇಕಯುತ ಚಿಂತನೆಗಳು ನಮ್ಮ ನಾಡಿನ ಪರಂಪರೆ ಶ್ರೀಮಂತಗೊಳಿಸಿವೆ ಎಂದು ಕೊಡಗು ವಿ.ವಿ. ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ವಿಶ್ವವಿದ್ಯಾಲಯ, ಕನ್ನಡ ಜಾನಪದ ಪರಿಷತ್ತು ಆಶ್ರಯದಲ್ಲಿ ಜರುಗಿದ ‘ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಗೀತೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಜರು ಜತನದಿಂದ ಸಂರಕ್ಷಿಸಿಕೊಂಡು ಬಂದಿರುವ ಜಾನಪದವನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಒಯ್ಯಬೇಕಿದೆ. ಜಾನಪದ ಎಂಬುದು ವಾಸ್ತವಿಕ ಆಧಾರಗಳ ಮೇಲೆ ನಿಲ್ಲಬಲ್ಲ ವಿಜ್ಞಾನವಾಗಿದೆ. ಕಲೆಯ ಜೊತೆಗೆ ಶಾಸ್ತ್ರೀಯ ಮುಖವನ್ನು ಸಹ ಒಳಗೊಂಡಿದೆ. ಕಲೆಯ ಜೊತೆಗೆ ಶಾಸ್ತ್ರೀಯವಾಗಿರುವ ಜಾನಪದವನ್ನು ನಾವೆಲ್ಲರೂ ಅರಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನಿಸುವುದು ಜಾನಪದ ಕಲೆ. ಬೀಸುವ ಕಲ್ಲು, ಕುಟ್ಟುವ ಒನಕೆ, ಕೇರುವ ಮೊರ ಮೊದಲಾದ ಜಾನಪದ ಸಂಸ್ಕೃತಿಗಳನ್ನು ನಶಿಸಲು ಬಿಡದೆ ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಿಕೊಂಡು ಹೋಗಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕೆಂದು ಅಶೋಕ್ ಕರೆಕೊಟ್ಟರು.

ಬೆಂಗಳೂರಿನ ಸಂಸ್ಕೃತ ವಿ.ವಿ.ವಿಶ್ರಾಂತ ಕುಲಪತಿ ಡಾ.ಪದ್ಮಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾನು ಹುಟ್ಟಿ ಬೆಳೆದ ನೆಲದಲ್ಲಿ ಕೊಡಗು ವಿಶ್ವವಿದ್ಯಾಲಯವು ಸ್ಥಾಪನೆಯಾಗಿರುವುದು ಬಹು ದೊಡ್ಡ ಸಂತಸದ ಸಂಗತಿ. ಗುಣಮಟ್ಟದ ಶಿಕ್ಷಣಕ್ಕೆ ಕೊಡಗು ವಿಶ್ವವಿದ್ಯಾಲಯ ಆದ್ಯತೆ ನೀಡಲಿ. ಪ್ರತಿಭೆ ಮತ್ತು ಜ್ಞಾನದ ಮೂಲಕ ಸಾಧನೆಯ ಶಿಖರವೇರಲಿಕ್ಕೆ ಸಾಧ್ಯ ಇದೆ ಎಂದರು.

ಆಶಯ ನುಡಿಗಳನ್ನಾಡಿದ ಕೊಡಗು ವಿ.ವಿ. ಮೌಲ್ಯಮಾಪನ ಕುಲಸಚಿವ ಡಾ.ಎಂ.ಸುರೇಶ್‌ ಅಲೆಟ್ಟಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದುವ ಮೂಲಕ ತಲೆಮಾರುಗಳಿಂದ ಬಂದಿರುವ ಹಾಗೂ ಪರಂಪರೆಯಲ್ಲಿ ಬೆಸೆದು ಹೋಗಿರುವ ಜಾನಪದವು ಅನಕ್ಷರಸ್ಥರಿಂದಲೇ ಬೆಳೆದು ಬಂದಿದೆ ಎಂದರು.

ವಿ.ವಿ. ನಿಕಟ ಪೂರ್ವ ಕುಲಸಚಿವ ಡಾ.ಸೀನಪ್ಪ ಮಾತನಾಡಿ, ಕನ್ನಡ ನಾಡು-ನುಡಿ, ಸಂಸ್ಕೃತಿ ಸಂರಕ್ಷಣಾ ಹೊಣೆ, ಜಾನಪದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಯಾವುದೇ ಅಧಿಕಾರ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿ ಸಾರವಾಗಿರುವ ಜನಪದವನ್ನು ಮಕ್ಕಳಾದಿಯಾಗಿ ಎಲ್ಲರೂ ಉಳಿಸಿ ಬೆಳೆಸಬೇಕೆಂದರು.

ಮೈಸೂರು ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಕಾವೇರಿ ಪ್ರಕಾಶ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಜಾನಪದ ಎಲ್ಲಾ ಸಂಸ್ಕೃತಿಗಳ ತಾಯಿ ಬೇರು. ಜಾಗತೀಕರಣದ ಪ್ರಭಾವದಿಂದ ನಶಿಸುತ್ತಿರುವ ಜನಪದ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸಿ ಸಂರಕ್ಷಿಸಬೇಕು ಎಂದರು.

ಮೈಸೂರು ಜಿಲ್ಲಾ ಕ.ಜಾ.ಪ. ಅಧ್ಯಕ್ಷ ಡಾ. ರಾಣಿಪ್ರಭಾ, ಡಾ. ವಿನೋದ, ಡಾ. ರವಿಶಂಕರ ಜಿ., ಜಂಟಿ ಕಾರ್ಯದರ್ಶಿ, ರಾಜೇಶ್ವರಿ ಟಿ.ಎನ್ ಇದ್ದರು.

ಕೊಡಗು ವಿ.ವಿ. ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಸಂಯೋಜಕ ಡಾ.ರವಿಶಂಕರ್, ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವೃಂದ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಕಾರ್ಯಕ್ರಮದಲ್ಲಿ ಡಾ.ಪದ್ಮಶೇಖರ್, ಜಾನಪದ ಕಲಾ ಸಾಧಕರಾದ ಕುಡಿಯರ ದೇವಕಿ, ಸುಳ್ಳಿಮಾಡ ಗೌರಿ ನಂಜಪ್ಪ ಹಾಗೂ ಕೊಡಗು ವಿ.ವಿ. ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಜೀವ್ ಹಾಗೂ ವಿದ್ಯಾಶ್ರೀ ಅವರನ್ನು ಗೌರವಿಸಲಾಯಿತು.

ಹೆಸರಾಂತ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ, ಯರಗನಹಳ್ಳಿ ಶ್ರೀಧರ್ ಅವರಿಂದ ಗೀತೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ನಿರೂಪಿಸಿದರು. ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಐ.ಕೆ.ಮಂಜುಳಾ ಸ್ವಾಗತಿಸಿದರು. ಉಪನ್ಯಾಸಕ ಡಾ. ರಮೇಶ್ ವಂದಿಸಿದರು.