ಕುಕನೂರಲ್ಲಿ ಜಿಲ್ಲಾಮಟ್ಟದ ಪಶು ಪಾಲಿಕ್ಲಿನಿಕ್‌ ಮಂಜೂರು: ಬಸವರಾಜ ರಾಯರಡ್ಡಿ

| Published : Nov 30 2024, 12:49 AM IST

ಕುಕನೂರಲ್ಲಿ ಜಿಲ್ಲಾಮಟ್ಟದ ಪಶು ಪಾಲಿಕ್ಲಿನಿಕ್‌ ಮಂಜೂರು: ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲಾ ಮಟ್ಟದ ಪಶು ಪಾಲಿಕ್ಲಿನಿಕ್ ಅನ್ನು ಕುಕನೂರು ಪಟ್ಟಣಕ್ಕೆ ಮಂಜೂರು ಮಾಡಿಸಲಾಗಿದೆ. ಈಗಾಗಲೇ ಕಟ್ಟಡಕ್ಕೆ ಸಹ ಅನುದಾನ ನೀಡಿದ್ದು, ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಸಹ ಸೂಚಿಸಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು: ಜಿಲ್ಲಾ ಮಟ್ಟದ ಪಶು ಪಾಲಿಕ್ಲಿನಿಕ್ ಅನ್ನು ಕುಕನೂರು ಪಟ್ಟಣಕ್ಕೆ ಮಂಜೂರು ಮಾಡಿಸಿದ್ದು, ಅದರ ಸವಲತ್ತನ್ನು ರೈತರು ಪಡೆಯಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 20 ಜಿಲ್ಲಾ ಮಟ್ಟದ ಪಶು ಪಾಲಿ ಕ್ಲಿನಿಕ್ ಮಂಜೂರು ಆಗಿದ್ದು, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡು ಯಲಬುರ್ಗಾ ಕ್ಷೇತ್ರದ ರೈತರಿಗೆ ಅನುಕೂಲ ಆಗಲೆಂದು ಕುಕನೂರು ಪಟ್ಟಣಕ್ಕೆ ಒಂದು ಪಶು ಪಾಲಿ ಕ್ಲಿನಿಕ್ ಮಂಜೂರು ಮಾಡಿಸಿದ್ದೇನೆ. ಈಗಾಗಲೇ ಕಟ್ಟಡಕ್ಕೆ ಸಹ ಅನುದಾನ ನೀಡಿದ್ದು, ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಸಹ ಸೂಚಿಸಿದ್ದೇನೆ. ಪಶುಗಳಿಗೆ ಯಾವುದೇ ರೀತಿಯ ಕಾಯಿಲೆ, ರೋಗ ಏನೆ ಇದ್ದರೂ ಸಂಪೂರ್ಣ ಚಿಕಿತ್ಸೆ ಇಲ್ಲಿಯೇ ಸಿಗುತ್ತದೆ. ಎಕ್ಸ್ ರೇ, ಎಂಡೋಸ್ಕೋಪ್, ಲ್ಯಾಂಡೋಸ್ಕೋಪ್ ಹಾಗೂ ಮಲ್ಟಿ ಪರ್ಪಸ್‌ ಚಿಕಿತ್ಸೆ ಇಲ್ಲಿಯೇ ದೊರೆಯುತ್ತದೆ. ಅಲ್ಲದೇ ಪಶು ಲಸಿಕೆ ಸಂಗ್ರಹಕ್ಕೆ ₹14 ಲಕ್ಷ ವೆಚ್ಚದ ಕೋಲ್ಡ್ ಸ್ಟೋರೇಜ್ ಸಹ ಮಂಜೂರು ಆಗಿದೆ. ಇದರ ಸವಲತ್ತನ್ನು ರೈತ ವರ್ಗ ಪಡೆಯಬೇಕು ಎಂದರು.

ಕುಕನೂರಿನ ಸಮಗ್ರ ಅಭಿವೃದ್ಧಿ: ಕುಕನೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ನೀಡಿದ್ದೇನೆ. ಈಗಾಗಲೇ ಕುಕನೂರು ಪಟ್ಟಣದಲ್ಲಿ ಇಂಧಿರಾ ಕ್ಯಾಂಟೀನ್ ನಿರ್ಮಾಣವಾಗಿದೆ. ಶೀಘ್ರದಲ್ಲಿ ಸಚಿವ ಭೈರತಿ ಸುರೇಶ ಅವರನ್ನು ಕರೆಯಿಸಿ ಉದ್ಘಾಟನೆ ಮಾಡುತ್ತೇವೆ. ಅಮೃತ್ ಯೋಜನೆಯಲ್ಲಿ ಕುಡಿಯುವ ನೀರು ಒದಗಿಸುವ ಕಾಮಗಾರಿ ಸಹ ಪೂರ್ಣಗೊಂಡಿದೆ. 1997ರಲ್ಲಿ ನಾನೇ ಮಂಜೂರು ಮಾಡಿಸಿ ಕಟ್ಟಿಸಿದ ಕಲ್ಯಾಣ ಮಂಟಪದ ನವೀಕರಣಕ್ಕೆ ಅನುದಾನ ಒದಗಿಸಿದ್ದೇನೆ. ಕುಕನೂರಿಗೆ 100 ಹಾಸಿಗೆ ಆಸ್ಪತ್ರೆ ಮಂಜೂರು ಆಗಿದ್ದು, ಶೀಘ್ರದಲ್ಲಿ ಭೂಮಿ ನಿಗದಿ ಮಾಡಿ ಕಟ್ಟಡ ಆರಂಭಿಸಲಾಗುವುದು. ತಹಸೀಲ್ದಾರ್‌ ಕಟ್ಟಡಕ್ಕೆ ಅನುದಾನ ಒದಗಿಸಿದ್ದೇನೆ. ಕುಕನೂರು ಬೈಪಾಸ್ ರಸ್ತೆ ಕಾಮಗಾರಿ ಸಹ ಆರಂಭವಾಗಲಿದೆ. ಶೀಘ್ರದಲ್ಲಿ ಕುಕನೂರು ಮೂಲಕ ಹುಬ್ಬಳ್ಳಿ ಕುಷ್ಟಗಿ ರೈಲ್ವೆ ಆರಂಭವಾಗಲಿದೆ. ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೇಜ್ ಗೋದಾಮು ಕಟ್ಟಡ ಕೆಲಸ ಆರಂಭವಾಗಿದೆ. ಡಿ. 2ರಂದು ಭಾನಾಪುರ ರೈಲ್ವೆ ಮೇಲ್ಸೇತುವೆ ಸಹ ಉದ್ಘಾಟನೆ ಮಾಡಲಿದ್ದೇನೆ ಎಂದರು.

ಕುಕನೂರು ಪಟ್ಟಣದಲ್ಲಿ 103 ಸಿ.ಎ. ಸೈಟ್, ಯಲಬುರ್ಗಾ ಪಟ್ಟಣದಲ್ಲಿ 63 ಸಿ.ಎ. ಸೈಟ್ ಇದ್ದು, ಅವುಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಭವನ ಹಾಗೂ ಇತರ ಕಚೇರಿಗಳ ನಿರ್ಮಾಣ ಮಾಡಲಾಗುವುದು ಎಂದರು. ಅದೇ ರೀತಿ ಕ್ಷೇತ್ರದ ಎಲ್ಲ ಗ್ರಾಪಂಗಳಲ್ಲಿರುವ ಸಿಎ ಸೈಟ್‌ಗಳ ಮಾಹಿತಿ ಸಹ ಪಡೆಯಲು ತಾಪಂ ಇಒ ಅವರಿಗೆ ಸೂಚಿಸಿದ್ದೇನೆ ಎಂದರು.

ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಮಲ್ಲಯ್ಯ, ಸಹಾಯಕ ನಿರ್ದೇಶಕ ಶಿವರಾಜ ಶೆಟ್ಟರ್, ವೈದ್ಯರಾದ ಸುರೇಶ ಸರಗಣೇಚಾರ, ಶಿವಶಂಕರ, ಮುಖಂಡರಾದ ನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೇಮನಿ, ಖಾಸಿಂಸಾಬ್ ತಳಕಲ್, ಸಂಗಮೇಶ ಗುತ್ತಿ, ರೆಹೆಮಾನಸಾಬ್ ಮಕ್ಕಪ್ಪನವರ್, ಪಪಂ ಸದಸ್ಯರಾದ ರಾಮಣ್ಣ ಬಂಕದಮನಿ, ಗಗನ ನೋಟಗಾರ, ನೂರುದ್ದೀನ್ ಗುಡಿಹಿಂದಲ್ ಇತರರಿದ್ದರು.