ಕೊಡಸಳ್ಳಿ ಮತ್ತು ಕೈಗಾ ಸ್ಥಾವರದ ಮೇಲ್ಭಾಗದ ಗುಡ್ಡ ಕುಸಿದು ಕೋಟ್ಯಂತರ ರು. ಮೌಲ್ಯದ ಅರಣ್ಯ ಮತ್ತು ಮಣ್ಣು ಕದ್ರಾ ಡ್ಯಾಮಿನಲ್ಲಿ ತುಂಬಿದ್ದು, ತೀವ್ರ ಆತಂಕ ಉಂಟುಮಾಡಿದೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ.

ಯಲ್ಲಾಪುರ: ಕೊಡಸಳ್ಳಿ ಮತ್ತು ಕೈಗಾ ಸ್ಥಾವರದ ಮೇಲ್ಭಾಗದ ಗುಡ್ಡ ಕುಸಿದು ಕೋಟ್ಯಂತರ ರು. ಮೌಲ್ಯದ ಅರಣ್ಯ ಮತ್ತು ಮಣ್ಣು ಕದ್ರಾ ಡ್ಯಾಮಿನಲ್ಲಿ ತುಂಬಿದ್ದು, ತೀವ್ರ ಆತಂಕ ಉಂಟುಮಾಡಿದೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕದ್ರಾ-ಕೈಗಾ ಮಧ್ಯದ ಭೀಕರ ಗುಡ್ಡದ ಭೂಕುಸಿತ ದೃಶ್ಯವನ್ನು ಸ್ವತಃ ನಾನು ನೋಡಿದ್ದು, ಅದನ್ನು ಗಮನಿಸಿದಾಗ ಡ್ಯಾಂ ಮತ್ತು ಅಣುಸ್ಥಾವರದ ಬಗ್ಗೆ ಭಯವುಂಟಾಗಿದೆ. ಈ ಕುರಿತು ಕೇಂದ್ರ, ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಪಡಿಸಿದ್ದಾರೆ.

ಇಡೀ ಅರ್ಧ ಗುಡ್ಡವೇ ಕುಸಿದು ನೆಲಸಮವಾಗಿದೆ. ಯಲ್ಲಾಪುರ-ಕೈಗಾ-ಕಾರವಾರ ರಸ್ತೆ ಸಹಿತ ಭೂ ಕುಸಿತದಿಂದ ನಿರ್ನಾಮವಾಗಿದೆ. ಭಯವೆಂದರೆ ಕದ್ರಾ ಡ್ಯಾಂನಿಂದ ಕೇವಲ ೧೫ ಕಿಮೀ ಅಂತರದಲ್ಲಿ ಈ ಭೂ ಕುಸಿತವಾಗಿದೆ. ಪ್ರಕೃತಿಯ ಈ ವಿಕೋಪವನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಮಾನವ ಈ ಪ್ರಕೃತಿ ವಿಕೋಪದಿಂದ ಪಾಠ ಕಲಿಯಲೇಬೇಕಿದೆ. ನೂರಾರು ಕೋಟಿಯ ವನ್ಯ ಸಂಪತ್ತು ನೆಲದಲ್ಲಿ ಹೂತುಹೋಗಿದೆ. ಈ ಮುಂದೆ ಇಂತಹ ಅನಾಹುತಗಳು ಆಗದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಸೂಳಗೇರಿ ಗ್ರಾಮಕ್ಕೆ ಕಾಲುಸಂಕ ನಿರ್ಮಾಣ:

ಕದ್ರಾ-ಕೊಡಸಳ್ಳಿ ಸುಳಗೇರಿ ರಸ್ತೆಯಲ್ಲಿ ಭೂ ಕುಸಿತ ಉಂಟಾದ್ದರಿಂದ ಕದ್ರಾಕ್ಕೆ ಹೋಗಲು ಸೂಳಗೇರಿ ಗ್ರಾಮದ ಜನರಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಇದನ್ನು ಅರಿತು ಕೆಪಿ‌ಸಿ ಕದ್ರಾ ಎಇಇ ನಿತೇಶ್ ಹಾಗೂ ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೋಕಾಶಿ ಅವರ ಮಾರ್ಗದರ್ಶನದಲ್ಲಿ ಸೂಳಗೇರಿ ಗ್ರಾಮದ ಜನರಿಗೆ ನದಿಯ ದಂಡೆಯ ಪಕ್ಕದಿಂದ ಕಟ್ಟಗೆಯ ಕಾಲುಸಂಕವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿ‌ಕೊಡಲಾಗಿದೆ.ಭೂ ಕುಸಿತದಿಂದಾಗಿ ರಸ್ತೆ ಸಂಪೂರ್ಣ ಬಂದ ಆಗಿದ್ದು, ಸೂಳಗೇರಿ ಭಾಗದ ಜನರಿಗೆ ರಸ್ತೆ ಇಲ್ಲದ ಕಾರಣ ಜನರ ತಾತ್ಕಾಲಿಕವಾಗಿ ತಿರುಗಾಡಲು ಕೆಪಿಸಿ ಕದ್ರಾ ವತಿಯಿಂದ ತಾತ್ಕಾಲಿಕ ಕಾಲು ಸಂಕ ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೆಪಿಸಿಯವರು ಮಣ್ಣು ತೆರವುಗೊಳಿಸಿ ರಸ್ತೆ ಸಂಪರ್ಕ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ‌ ಮಾಡಿದ್ದಾರೆ. ಆದರೆ ಮಣ್ಣು ತೆಗೆದರೆ ಮತ್ತೆ ಮಣ್ಣು ಕುಸಿಯಬಹುದು ಎಂಬ ಕಾರಣಕ್ಕೆ ರಸ್ತೆಯ ಮಣ್ಣು ತೆಗೆದಿಲ್ಲ ಎಂದು ಹೇಳಲಾಗುತ್ತಿದೆ.