ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಾಹಿತ್ಯದ ಬೆಳವಣಿಗೆಗೆ ದಾನಿಗಳ ಸಹಕಾರದ ಅಗತ್ಯವಿದೆ. ಬರಹಗಾರರನ್ನು ಪ್ರೋತ್ಸಾಹಿಸಲು ದಾನಿಗಳು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕರೆ ನೀಡಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ನಡೆದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರು ಬರೆದಿರುವ ಕೊಡವ ಮಕ್ಕಡ ಕೂಟದ 92ನೇ ಪುಸ್ತಕ ‘ಕೊಯ್ತ ಮುತ್ತ್’ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಉತ್ಸಾಹಿ ಬರಹಗಾರರಿದ್ದಾರೆ, ಇವರ ಪುಸ್ತಕಗಳನ್ನು ಹೊರ ತರುವ ಮೂಲಕ ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ಕೆಲಸವನ್ನು ಕೊಡವ ಮಕ್ಕಡ ಕೂಟ ಮಾಡಿಕೊಂಡು ಬರುತ್ತಿದ್ದು, ಕೊಡವ ಸೇರಿದಂತೆ ವಿವಿಧ ಭಾಷೆಗಳ 92 ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ತೃಪ್ತಿ ಇದೆ. ಕೂಟದ ನೂರನೇ ಪುಸ್ತಕವನ್ನು ಆ.17 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ‘ಗೌರಮ್ಮ ದತ್ತಿ ನಿಧಿ ’ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಮತ್ತಷ್ಟು ಪುಸ್ತಕಗಳನ್ನು ಹೊರ ತರುವ ಮತ್ತು ಬರಹಗಾರರನ್ನು ಪ್ರೋತ್ಸಾಹಿಸುವ ಗುರಿ ಕೊಡವ ಮಕ್ಕಡ ಕೂಟದ ಮುಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದಾನಿಗಳು ಮುಂದೆ ಬಾರದೆ ಇರುವುದು ಬೇಸರ ತಂದಿದೆ ಎಂದರು.
‘ಕೊಯ್ತ ಮುತ್ತ್’ ಕೊಡವ ಪುಸ್ತಕದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ ಮಾತನಾಡಿ, ಹೆಣ್ಣುಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಸಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿವಾಹಿತ ಮಹಿಳೆಯರು ಸಾಧನೆ ತೋರಲು ಪತಿ ಹಾಗೂ ಕುಟುಂಬಸ್ಥರು ಸಹಕಾರ ನೀಡುವ ಅಗತ್ಯವಿದೆ ಎಂದರು.ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 92 ಕೃತಿಗಳು ಬಿಡುಗಡೆಯಾಗಿರುವುದು ಶ್ಲಾಘನೀಯ ಎಂದರು.
ಸಮಾಜ ಸೇವಕಿ ಅಮ್ಮಂಡ ಕಿಟ್ಟಿ ಬೆಳ್ಯಪ್ಪ, ಹೊಸ ಬರಹಗಾರರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟ ಇದೀಗ 100ನೇ ಪುಸ್ತಕ ಬಿಡುಗಡೆಗೆ ತಯಾರಿ ನಡೆಸಿರುವುದು ಹೆಮ್ಮೆಯ ವಿಚಾರವೆಂದರು.ಸಮಾಜ ಸೇವಕಿ ಬೈರೆಟ್ಟಿರ ಗಿರಿಜಾ ಅಯ್ಯಪ್ಪ ಪುಸ್ತಕ ಬಿಡುಗಡೆಗೊಳಿಸಿದರು. ಸಮಾಜ ಸೇವಕ ಕೇಕಡ ಯಶೋಧ ಕಾವೇರಿಯಪ್ಪ ಹಾಗೂ ನೆರವಂಡ ಅನಿತಾ ಚರ್ಮಣ್ಣ ಇದ್ದರು.