ಸಾರಾಂಶ
ನರೇಗಲ್ಲ ಸಮೀಪದ ಕೊಡಿಕೊಪ್ಪದಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ಬಸ್ ಶೆಲ್ಟರ್ ದನ ಕಟ್ಟಲು ಬಳಕೆಯಾಗುತ್ತಿದೆ. ದನದ ಸಗಣಿ, ಮೇವು ತುಂಬಿಕೊಂಡಿರುವ ಶೆಲ್ಟರ್ ಬಿಟ್ಟು ಜನತೆ ರಸ್ತೆಯಲ್ಲೆ ನಿಂತು ಸಂಚರಿಸುವಂತಾಗಿದೆ.
ನರೇಗಲ್ಲ: ಸಮೀಪದ ಕೊಡಿಕೊಪ್ಪದಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ಬಸ್ ಶೆಲ್ಟರ್ ದನ ಕಟ್ಟಲು ಬಳಕೆಯಾಗುತ್ತಿದೆ. ದನದ ಸಗಣಿ, ಮೇವು ತುಂಬಿಕೊಂಡಿರುವ ಶೆಲ್ಟರ್ ಬಿಟ್ಟು ಜನತೆ ರಸ್ತೆಯಲ್ಲೆ ನಿಂತು ಸಂಚರಿಸುವಂತಾಗಿದೆ.
ಈ ರಸ್ತೆಯಲ್ಲಿ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಸಂಜೆಯಾದರೆ ತಂಡೋಪತಂಡವಾಗಿ ಆಗಮಿಸುವ ವಿದ್ಯಾರ್ಥಿಗಳು ರಸ್ತೆಯ ಪಕ್ಕದಲ್ಲಿಯೇ ನಿಂತು ಸಂಚರಿಸುವುದು ಅನಿವಾರ್ಯವಾಗಿದೆ.ಕೋಚಲಾಪುರ ಕ್ರಾಸ್ ಬಳಿ ನಿರ್ಮಿಸಿದ್ದ ಶೆಲ್ಟರ್ ಅನಾಥರ ಮನೆಯಂತಾಗಿದೆ. ಅಲ್ಲಿ ಯಾವ ಪ್ರಯಾಣಿಕರು ಕೂರಲು ಸುಸಜ್ಜಿತವಾದ ವಾತಾವರಣ ಇಲ್ಲದ್ದರಿಂದ ಇಲ್ಲಿಯೂ ಜನತೆ ರಸ್ತೆಯಲ್ಲಿಯೇ ನಿಂತು ಸಂಚರಿಸುವಂತಾಗಿದೆ. ಈ ಶೆಲ್ಟರ್ ಒಳಭಾಗದ ಗೋಡೆಗಳು ಕೆಲವು ಕಂಪನಿಗಳ ಜಾಹೀರಾತುಗಳ ಬಿತ್ತರಣೆಯ ಸ್ಥಳದ ಜೊತೆಗೆ ಪ್ರೇಮಿಗಳು ಪರಸ್ಪರ ಹೆಸರು ಬರೆದು ಅಂದಗೆಡಿಸುವ ಸ್ಥಳವಾಗಿದೆ.ಬಸ್ ಶೆಲ್ಟರ್‌ಗಳಲ್ಲಿ ಪ್ರಯಾಣಿಕರು ಕೂರಲು ಹಾಕಿದ್ದ ಆಸನಗಳ ಮೇಲಿನ ಪಾಟೀಕಲ್ಲುಗಳು ಮಾಯವಾಗಿವೆ. ಪೊಲೀಸ್ ಠಾಣಾ ಹತ್ತಿರ, ನಾಗರಕೆರೆಹತ್ತಿರ ಹಾಗೂ ಮಲ್ಲಾಪುರದಲ್ಲಿರುವ ಶೆಲ್ಟರ್‌ಗಳು ಗಿಡ ಗಂಟಿಗಳಿಂದ ಮುಚ್ಚಿಕೊಂಡಿದ್ದು, ವಿಷ ಜಂತುಗಳು, ಹುಳ ಹುಪ್ಪಟಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಈ ಸ್ಥಳಗಳಲ್ಲಿ ಕೆಲವರು ಬೈಕ್ ನಿಲ್ಲಿಸುತ್ತಿದ್ದರೆ, ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಅಲ್ಲಿಯೇ ಮಲಗುತ್ತಾರೆ. ಇವು ಸೇರಿದಂತೆ ನರೇಗಲ್ಲ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದ್ದ 6 ಬಸ್ ಶೆಲ್ಟರ್‌ಗಳಲ್ಲಿ 5 ಶೆಲ್ಟರ್‌ಗಳು ಹಾಳುಬಿದ್ದಿವೆ.ಬಸ್ ಶೆಲ್ಟರ್‌ಗಳನ್ನು ಶುಚಿಗೊಳಿಸಲು ಡಿಪೋ ಮ್ಯಾನೇಜರ್ ಜೊತೆ ಮಾತನಾಡುತ್ತೇವೆ. ಒಂದು ವೇಳೆ ಸಿಬ್ಬಂದಿ ಕೊರತೆ ಇದೆ ಎಂದು ಕೇಳಿ ಬಂದಲ್ಲಿ ವಾರಕ್ಕೊಂದು ಬಾರಿ ನಮ್ಮ ಸಿಬ್ಬಂದಿಯ ಸಹಾಯದಿಂದ ಶುಚಿಗೊಳಿಸುತ್ತೇವೆ ಎಂದು ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ಹೇಳಿದರು.