ಪುತ್ತರಿ ಕೋಲ್‌ ಮಂದ್‌ ಕಾರ್ಯಕ್ರಮ ಸಾಂಪ್ರದಾಯಕವಾಗಿ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಐದು ಗ್ರಾಮಗಳನ್ನು ಪ್ರತಿನಿಧಿಸುವ ಬಿರುನಾಣಿಯ ಮರೆನಾಡ್ ಕೊಡವ ಸಮಾಜ ಆಶ್ರಯದಲ್ಲಿ ನಡೆಯುತ್ತಿರುವ ಪುತ್ತರಿ ಕೋಲ್ ಮಂದ್ ಕಾರ್ಯಕ್ರಮ ಸಾಂಪ್ರದಾಯಕವಾಗಿ ವಿಜೃಂಭಣೆಯಿಂದ ನಡೆಯಿತು.ಪರಂಪಾರಿಕ ನಾಡ್ ತಕ್ಕರಾದ ಕಾಯಪಂಡ, ಚಂಗಣಮಾಡ ಬೊಳ್ಳೇರ ಕುಟುಂಬದ ಪ್ರಮುಖರು ಮತ್ತು ಮುಖ್ಯ ಅತಿಥಿಗಳನ್ನು ದುಡಿ ಕೊಟ್ಟ್ ಪಾಟ್, ವಡ್ಡೋಲಗ ಹಾಗೂ ತಳೆಯತಕ್ಕಿ ಬೊಳಕ್ ಮೂಲಕ ಮಂದ್ ಗೆ ಕರೆತರಲಾಯಿತು. ನಂತರ ನಾಡ ತಕ್ಕದಿಂದ ಮಂದ್ ಪುಡಿಪ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆಯಿತು. ನಂತರ ಪುತ್ತರಿ ಕೋಲಾಟ್ ನಡೆಯಿತು.

ಈ ಸಂದರ್ಭ ಮುಖ್ಯ ಅತಿಥಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಸಹ ಖಜಾಂಚಿ ಮಲ್ಲೇಗಡ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಕೊಡವ ಸಂಸ್ಕೃತಿ ಆಚರಣೆ ಪರಂಪರೆಗಳನ್ನು ಬೆಳೆಸಬೇಕು, ನಮ್ಮ ಸಂಸ್ಕೃತಿಯನ್ನು ಎಂದಿಗೂ ನಿರ್ಲಕ್ಷ ಮಾಡದೆ ಬೆಳೆಸಿಕೊಂಡು ಹೋಗಬೇಕು. ಕೊಡಗು ಎಂದಿಗೂ ಕಾಶ್ಮೀರದಂತೆ ಆಗಬಾರದು ಕಾಶ್ಮೀರದಂತೆ ಮೂಲ ನಿವಾಸಿಗಳನ್ನು ತಾಯಿನಾಡಿನಲ್ಲಿಯೇ ದುರ್ಬಲವಾಗುವ ಹಾಗೂ ಅಭದ್ರತೆ ಕಾಡುವ ಸ್ಥಿತಿಗೆ ತಂದುಕೊಳ್ಳಬಾರದು ಎಂದು ಪರೋಕ್ಷ ಮಾರ್ಮಿಕವಾಗಿ ನುಡಿದ ಅವರು ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವರು ಪ್ರತಿ ಹೆಜ್ಜೆಯಲ್ಲಿಯು ಇದನ್ನು ಅರಿತು ಬುದ್ಧಿವಂತಿಕೆ ಹಾಗೂ ರಾಜಕೀಯ ರಹಿತವಾಗಿ ಚಿಂತನೆ ಹರಿಸಿ ಜನಾಂಗವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದರ ನಡುವೆ ಸಂಸ್ಕೃತಿಯ ಉಳಿಕೆಗೆ ಆಚರಣೆಗಳಿಗೆ ಬಹಳಷ್ಟು ಉತ್ತೇಜನ ನೀಡಬೇಕಾಗಿದೆ, ಇಂತಹ ಕಾರ್ಯಕ್ರಮಗಳಿಂದ ಸಂಸ್ಕೃತಿಗೆ ಜೀವಂತಿಗೆ ಬರಲಿದೆ ಎಂದು ಅವರು ಹೇಳಿದರು.

ಕೊಡವ ಜನಾಂಗದಲ್ಲಿ ದೈಹಿಕ ಸದೃಢತೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಕಂಡುಬರುತ್ತದೆ, ಈ ಹಿನ್ನೆಲೆ ಹೆಚ್ಚಾಗಿ ಕ್ರೀಡೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಜನಾಂಗದಲ್ಲಿ ಹಾಕಿ, ಕ್ರಿಕೆಟ್, ವಾಲಿಬಾಲ್ ಥ್ರೋಬಾಲ್, ಫುಟ್ಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಹೀಗೆ ಎಲ್ಲಾ ಟೂರ್ನಮೆಂಟ್ ನಡೆಸುವ ಮೂಲಕ ನಮ್ಮ ವೃತ್ತಿ ಜೀವನಕ್ಕೆ ಧಕ್ಕೆ ತಂದುಕೊಳ್ಳಬಾರದು. ಪ್ರತಿ ಕ್ರೀಡೆಯನ್ನು ಆಯೋಜಿಸುವ ಮೂಲಕ ಅದರಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ಅಭಿವೃದ್ಧಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಇದರಿಂದ ನಮ್ಮ ಕೆಲಸ ಕಾರ್ಯ ಬಿಟ್ಟು ನಮ್ಮ ಜೀವನ ಶೈಲಿಯೇ ತೊಂದರೆಗೆ ಸಿಲುಕಬಹುದು ಎಂದು ಹೇಳಿದ ಅವರು ಕ್ರೀಡಾ ಟೂರ್ನಮೆಂಟ್ ಗಳಿಗೆ ಮಿತಿ ಬೇಕಾಗಿದೆ, ಆದರೆ ಸಂಸ್ಕೃತಿಯ ಉತ್ತೇಜಿಸುವ ಕಾರ್ಯಕ್ರಮಕ್ಕೆ ಹಾಗೂ ಸಂಸ್ಕೃತಿಯ ಆಚರಣೆಗಳಿಗೆ ಯಾವುದೇ ಮಿತಿ ಇರಬಾರದು ಅದನ್ನು ಆದಷ್ಟು ಹೆಚ್ಚಾಗಿ ಕಾರ್ಯಕ್ರಮ ಆಗಬೇಕು ಎಂದು ಪ್ರತಿಪಾದಿಸಿದರು.ಇಚೆಗೆ ನೂತನ ಆಡಳಿತ ಮಂಡಳಿ ಬೆಂಗಳೂರು ಕೊಡವ ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಜನಾಂಗದ ಅಭಿವೃದ್ಧಿಗೆ ನಾವು ತೊಡಗಿಸಿಕೊಳ್ಳಲು ಸಂಕಲ್ಪ ಪಟ್ಟಿದ್ದು, ವಧು ವರ ಅನ್ವೇಷಣೆ ಸೇವೆಯನ್ನು ಫೆಬ್ರವರಿಯಲ್ಲಿ ದೊಡ್ಡದಾಗಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ, ಹಾಗೆಯೇ ಬೆಂಗಳೂರು ಕೊಡವ ಸಮಾಜದಿಂದ ಜನಾಂಗಕ್ಕೆ ಒಳ್ಳೆಯದಾಗುವ ವಿಚಾರ ಯೋಜನೆಗಳನ್ನು ಮುಂದೆ ತರುತ್ತೇವೆ ಶಾಲೆ, ಕಾಲೇಜು, ವೃದ್ಧಾಶ್ರಮ ಗಳನ್ನು ನಾವು ಈಗಾಗಲೇ ಕೊಡವ ಸಮಾಜಕ್ಕೆ ಮಂಜೂರು ಆಗಿರುವ ಏಳು ಎಕರೆ ಜಾಗದಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು. ಹಾಗೆಯೇ ದಾನಿಗಳು ಮುಂದಕ್ಕೆ ಬಂದು ಜಾಗ ನೀಡಿದರೆ ಗೋಣಿಕೊಪ್ಪ ಹಾಗೂ ವಿರಾಜಪೇಟೆಗಳಲ್ಲಿಯೂ ಜನಾಂಗದ ಹಾಗೂ ಕೊಡಗಿನ ಜನರಿಗೆ ಉಪಯುಕ್ತವಾಗುವ ಯೋಜನೆಗಳನ್ನು ರೂಪಿಸುವ ಉದ್ದೇಶ ಇದೆ ಎಂದು ಹೇಳಿದರು.ಗಡಿ ಭಾಗದಲ್ಲಿರುವ ಮರೆನಾಡು ಕೊಡವ ಸಮಾಜದ ಅಭಿವೃದ್ಧಿಗೆ ಸಾಧ್ಯವಾದಷ್ಟು ಎಲ್ಲಾ ನೆರವು ನೀಡುವುದಾಗಿ ಘೋಷಿಸಿದ ಅವರು ಯಾವುದೇ ಸಮಾಜ ಒಂದೇ ಸಲಕ್ಕೆ ದೊಡ್ಡದಾಗಿ ಬೆಳೆಯುವುದಿಲ್ಲ ಉತ್ತಮ ಪರಿಸರದಲ್ಲಿರುವ ಮರೆನಾಡು ಕೊಡವ ಸಮಾಜ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದೊಡ್ಡದಾಗಿ ಬೆಳೆಯುವ ಎಲ್ಲಾ ಲಕ್ಷಣ ಇದೆ. ತುಂಬಾ ಎತ್ತರಕ್ಕೆ ಬೆಳೆಯಲು ನಾವು ಎಲ್ಲಾ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು.