ಸಾರಾಂಶ
ಮದಿಪಿನವರಾಗಿ ಅಣ್ಣಪ್ಪ ಅಮ್ಮುಂಜೆ, ದರ್ಶನದ ಪಾತ್ರಿ ಸಂರಯ್ಯ ಪೂಜಾರಿ, ಮುಯ್ಯ ಪಂಬದ ಮತ್ತು ಅಶೋಕ ನಲ್ಕೆಯವರ ತಂಡದವರು ಕೋಲವನ್ನು ನಡೆಸಿಕೊಟ್ಟರು. ಗುರಿಕಾರ ಸದಾನಂದ ಶೆಟ್ಟಿ, ಪಂದಿಬೆಟ್ಟು ಕೃಷ್ಣ ಶೆಟ್ಟಿ, ಹಿರಿಯ ಸದಸ್ಯ ಶ್ರೀನಿವಾಸ ಶೆಟ್ಟಿ ತೋನ್ಸೆ, ಸುರೇಶ ಶೆಟ್ಟಿ, ಅಜಯ್ ಶೆಟ್ಟಿ, ಹರೀಶ ಶೆಟ್ಟಿ ಮುಂತಾದವರು ನೇತೃತ್ವ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮದ ಅಕ್ವಾಲೆ ಕುಟುಂಬದಲ್ಲಿ ಸುಮಾರು ಐವತ್ತು ಲಕ್ಷ ರು.ಗಿಂತಲೂ ಹೆಚ್ಚಿನ ವೆಚ್ಚದಲ್ಲಿ ನೂತನ ದೈವಸ್ಥಾನ ನಿರ್ಮಿಸಿ, ಮಂಚ, ಮುಖವಾಡ, ಆಯುಧ, ಅಗತ್ಯ ಸಲಕರಣೆಗಳನ್ನು ಅಳವಡಿಸಿತ್ತು. ಹೊಸ ದೈವಸ್ಥಾನದ ಉದ್ಘಾಟನೆಯ ನಂತರ ಮೊದಲನೇ ಬಾರಿಗೆ ಸತತವಾಗಿ ಆರು ದಿನ ಕೋಲದ ಕಾರ್ಯ ಇತ್ತೀಚೆಗೆ ಜರುಗಿ ದಾಖಲೆ ನಿರ್ಮಿಸಿದೆ.ಮುದ್ರಿತ ಆಮಂತ್ರಣ, ಪ್ರಚಾರ ಫಲಕವಿಲ್ಲದೆ ಕೇವಲ ವಾಟ್ಸಾಪ್ ಮೂಲಕ ಮಾಹಿತಿ, ಆಹ್ವಾನ ಪಡೆದು ಹೊರರಾಜ್ಯಗಳಿಂದ, ವಿದೇಶಗಳಿಂದ ಕುಟುಂಬದ ಸದಸ್ಯರು, ಬಂಟ ಸಮುದಾಯವರು, ಬಂಧುಗಳು ಆಗಮಿಸಿದ್ದರು.
ಮೊದಲನೇ ದಿನ ಮೂಲ ಮಯಿಸಂಧಾಯೆ, ಮರ್ಲ್ ಜುಮಾಧಿ ಮತ್ತು ಪರಿವಾರ ದೈವಗಳ, ಎರಡನೇ ದಿನ ಮಾಲೆ ಸವಾರ ಬೈಕಡ್ತಿ ಮತ್ತು ಪಂಜುರ್ಲಿ ದೈವಗಳ ಕೋಲ, ಮೂರನೇ ದಿನ ಈ ಭೂತಗಳ ತಂಬಿಲ ಸೇವೆ ಜರುಗಿತು. ನಾಲ್ಕು, ಐದು, ಆರನೇ ದಿನ ಕುಟುಂಬದ ಸದಸ್ಯ ಅಜಯ್ ಶೆಟ್ಟಿ ಅವರ ಹರಕೆಯ ಕೋಲ, ತಂಬಿಲ ಸೇವೆಗಳು ಜರುಗಿತು.ಮದಿಪಿನವರಾಗಿ ಅಣ್ಣಪ್ಪ ಅಮ್ಮುಂಜೆ, ದರ್ಶನದ ಪಾತ್ರಿ ಸಂರಯ್ಯ ಪೂಜಾರಿ, ಮುಯ್ಯ ಪಂಬದ ಮತ್ತು ಅಶೋಕ ನಲ್ಕೆಯವರ ತಂಡದವರು ಕೋಲವನ್ನು ನಡೆಸಿಕೊಟ್ಟರು. ಗುರಿಕಾರ ಸದಾನಂದ ಶೆಟ್ಟಿ, ಪಂದಿಬೆಟ್ಟು ಕೃಷ್ಣ ಶೆಟ್ಟಿ, ಹಿರಿಯ ಸದಸ್ಯ ಶ್ರೀನಿವಾಸ ಶೆಟ್ಟಿ ತೋನ್ಸೆ, ಸುರೇಶ ಶೆಟ್ಟಿ, ಅಜಯ್ ಶೆಟ್ಟಿ, ಹರೀಶ ಶೆಟ್ಟಿ ಮುಂತಾದವರು ನೇತೃತ್ವ ವಹಿಸಿದ್ದರು.