ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರ ಸಜ್ಜು

| Published : Apr 26 2024, 12:51 AM IST

ಸಾರಾಂಶ

ಕೋಲಾರ ಲೋಕಸಭಾ ಕ್ಷೇತ್ರವು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು ೧೭,೨೬,೯೧೪ ಜನ ಮತ ಚಲಾಯಿಸುವ ಆರ್ಹತೆ ಪಡೆದಿದ್ದಾರೆ. ಈ ಪೈಕಿ ಪುರುಷ ಮತದಾರರು ೮೫೩೮೨೯, ಮಹಿಳಾ ಮತದಾರರು ೮೭೨೮೭೪ ಜನ ಹಾಗೂ ತೃತೀಯ ಲಿಂಗಿಗಳು ೨೧೧ ಜನ ಇದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಶುಕ್ರವಾರ ಬೆಳಿಗ್ಗೆ ೭ ರಿಂದ ಸಾಯಂಕಾಲ 5ರವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ನಗರದ ಜಿಲ್ಲಾಡಳಿತ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಡಿಮಸ್ಟ್‌ರಿಂಗ್ ಕೊಠಡಿ ಸ್ಥಾಪಿಸಲಾಗಿದೆ, ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ನಿಯೋಜಿತ ಸಿಬ್ಬಂದಿಗೆ ಅಗತ್ಯ ಎಲ್ಲಾ ತರಬೇತಿಗಳನ್ನು ನೀಡಲಾಗಿದೆ ಎಂದರು.

ಕೋಲಾರ ಲೋಕಸಭಾ ಕ್ಷೇತ್ರವು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು ೧೭,೨೬,೯೧೪ ಜನ ಮತ ಚಲಾಯಿಸುವ ಆರ್ಹತೆ ಪಡೆದಿದ್ದಾರೆ. ಈ ಪೈಕಿ ಪುರುಷ ಮತದಾರರು ೮೫೩೮೨೯, ಮಹಿಳಾ ಮತದಾರರು ೮೭೨೮೭೪ ಮಂದಿ ಹಾಗೂ ತೃತೀಯ ಲಿಂಗಿಗಳು ೨೧೧ ಮಂದಿ ಇದ್ದಾರೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ನೋಂದಣಿಯಾಗಿರುವ ಯುವ ಮತದಾರರ ಸಂಖ್ಯೆ ೪೯,೧೯೫ ಹಾಗೂ ೮೫ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರ ಸಂಖ್ಯೆ ೧೬೯೩೯ ಇದ್ದು, ವಿಕಲಚೇತನರು ೨೧೪೮೧ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

ಮತದಾನ ಕೇಂದ್ರಗಳು:

ಲೋಕಸಭಾ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೨೦೫೩ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ೧೫೦೦ಕ್ಕೂ ಹೆಚ್ಚು ಇರುವ ಮತಕೇಂದ್ರಗಳ ಸಂಖ್ಯೆ ೭ ಸೇರಿದಂತೆ ಒಟ್ಟು ೨೦೬೦ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ಗಾಳಿ, ಬೆಳಕು, ರಸ್ತೆ, ವಿದ್ಯುತ್, ಕುಡಿಯುವ ನೀರು, ಮತದಾನ ಕೇಂದ್ರದ ಮುಂದೆ ಬಿಸಲು ತಡೆಗೆ ಶಾಮಿಯಾನ, ವಿಕಲ ಚೇತನರಿಗೆ ವಿಶೇಷ ಮತ ಪೆಟ್ಟಿಗೆ ಜೊತೆಗೆ ವೀಲ್ ಚೇರ್ ವ್ಯವಸ್ಥೆ ಇರುತ್ತದೆ. ಮತ ಕೇಂದ್ರದ ಬಳಿಯೇ ಹೆಲ್ಪ್ ಡೆಸ್ಕ್ ಸೌಲಭ್ಯವನ್ನು ಕಲ್ಪಿಸಲಾಗಿದೆ, ೧೦೦೦ ಟ್ರೈಸೈಕಲ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸೂಕ್ಷ್ಮ ೪೪೧ - ಅತಿಸೂಕ್ಷ್ಮ ೬೧ ಮತಕೇಂದ್ರಗಳು:

ಲೋಕಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ಷ್ಮ ಮತಗಟ್ಟೆಗಳು ೪೪೧ ಹಾಗೂ 61 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ೫೭ ಮತಗಟ್ಟೆಗಳು ಅತೀಸೂಕ್ಷ್ಮ ಮತಕೇಂದ್ರಗಳೆಂದು ಗುರುತಿಸಲಾಗಿದೆ. ಮೈಕ್ರೋ ವೀಕ್ಷಕರು ೫೦೮ ಮಂದಿಯನ್ನು ನಿಯೋಜಿಸಿದೆ. ಒಟ್ಟು ಮತಕೇಂದ್ರಗಳ ವ್ಯಾಪ್ತಿಯಲ್ಲಿ ಶೇ.೬೩ ರಷ್ಟು ಮತಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ೧೨೩೧ ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ ಎಂದರು.

೭೬.೨೯ ಲಕ್ಷ ರು. ಮೌಲ್ಯದ ಚಿನ್ನ,ಮದ್ಯ,ಇತರೆ ವಸ್ತುಗಳ ವಶ:

ಚುನಾವಣೆ ಅಧಿಸೂಚನೆ ಪ್ರಕಟ ದಿನಾಂಕದಿಂದ ಈವರೆಗೆ ೭೬,೨೯ ಲಕ್ಷ ರು. ಮೌಲ್ಯದ ಚಿನ್ನಾಭರಣ, ಮದ್ಯ ಹಾಗೂ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ೪೦.೮ ಲಕ್ಷ ರು. ಮೌಲ್ಯದ ೩೩೮ ಲೀ. ಮದ್ಯ, ೧೪.೮೫ ಲಕ್ಷ ರು. ಮೌಲ್ಯದ ೧೬.೬೨ ಕೆ.ಜಿ.ಡ್ರಗ್ಸ್, ಗಾಂಜಾ ಇತ್ಯಾದಿಗಳು, ೩,೧೪,೪೪೦ ರು. ಮೌಲ್ಯದ ೫೭.೬ ಗ್ರಾಂ. ಚಿನ್ನ,ಬೆಳ್ಳಿಯ ವಸ್ತುಗಳು, ೩೦.೧೩ ಲಕ್ಷ ರು. ಮೌಲ್ಯದ ಕುಕ್ಕರ್, ಸೀರೆ ಇತರೆಗಳು ಸೇರಿ ಈವರೆಗೆ ಒಟ್ಟಾರೆ ೭೬,೨೮,೮೧೫ ರು ಮೌಲ್ಯದ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ.

ಲೋಕಸಭಾ ವ್ಯಾಪ್ತಿಯಲ್ಲಿನ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟ್‌ರಿಂಗ್ ಮತ್ತು ಡಿ ಮಸ್ಟ್‌ರಿಂಗ್ ಕೇಂದ್ರಗಳಿಗೆ ಆಯಾ ತಾಲೂಕಿನ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ, ಒಟ್ಟು ೨೧೯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಪಡೆಯಲಾಗಿದ್ದು ಎಲ್ಲ ಬಸ್ ಗಳಿಗೂ ಜಿಪಿಎಸ್ ಅಳವಡಿಸಿದೆ. ಎಲ್ಲ ಮತ ಕೇಂದ್ರಗಳಲ್ಲೂ ಸಿಬ್ಬಂದಿಗೆ, ಅಧಿಕಾರಿಗಳಿಗೆ ಊಟ, ತಿಂಡಿ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಮತಯಂತ್ರಗಳನ್ನು ಜಿ.ಪಿ.ಎಸ್ ಅಳವಡಿಸಿರುವ ವಾಹನಗಳಿಂದ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಯಲ್ಲಿ ದಾಸ್ತಾನು ಮಾಡಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಳ್, ಚುನಾವಣಾ ಅಧಿಕಾರಿಗಳಾದ ಮಂಜುಳ, ನಾಗವೇಣಿ, ವಾರ್ತಾ ಇಲಾಖೆ ಅಧಿಕಾರಿಗಳಾದ ಚೇತನ್ ಕುಮಾರ್, ಕೌಸಲ್ಯ ಇದ್ದರು.

ಮತಗಟ್ಟೆಗಳ ಬಳಿ ಸೆಕ್ಷನ್ ೧೪೪ ಜಾರಿ:

ಮತಗಟ್ಟೆಯ ೨೦೦ ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ೩ ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಜಾತ್ರೆ, ಸಂತೆ, ಮೆರವಣಿಗೆ, ಇತ್ಯಾದಿಗಳು ಇರುವುದಿಲ್ಲ. ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ. ಮತದಾರರನ್ನು ಒಲೈಸಲು ಯಾವುದೇ ರೀತಿ ಅಮಿಷ ನೀಡಬಾರದು, ಮತದಾನ ಕೇಂದ್ರಗಳಲ್ಲಿ ಮತವನ್ನು ಬಹಿರಂಗ ಪಡೆಸುವಂತಿಲ್ಲ. ಮತ ಕೇಂದ್ರದೊಳಗೆ ನೀರು, ಮೊಬೈಲ್, ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮತಕೇಂದ್ರದೊಳಗೆ ಯಾವುದೇ ರೀತಿ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ. ಪ್ರತಿ ೨ ಗಂಟೆಗೆ ಒಮ್ಮೆ ಮತದಾನದ ವಿವರಗಳ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡುವಂತೆ ಸೂಚಿಸಲು ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ೧೩೪೧ ಸಿವಿಜಿಲ್ ದೂರುಗಳು ಬಂದಿದ್ದು, ಎಲ್ಲವನ್ನೂ ಸ್ವೀಕರಿಸಲಾಗಿದೆ. ಮ್ಯಾನುಯೆಲ್ ೩೪ ದೂರುಗಳನ್ನು ದಾಖಲಾಗಿಸಿದೆ, ಒಟ್ಟು ೨೬೬ ದೂರುಗಳನ್ನು ದಾಖಲಾಗಿದ್ದು, ಇದರಲ್ಲಿ ೧೮೭ ಸಾರ್ವಜನಿಕ ದೂರುಗಳಾಗಿವೆ ಎಂದು ತಿಳಿಸಿದರು.