ಕೋಲಾರ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ತಂಡವು ದ್ವಿತೀಯ ಸ್ಥಾನ ಪಡೆದು ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವುದಕ್ಕೆ ತಂಡದ ಗೌರವಾಧ್ಯಕ್ಷರು ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಗೌರಿಬಿದನೂರಿನ ಪಿನಾಕಿನಿ ಬ್ಯಾಸ್ಕೆಟ್ ಬಾಲ್ ತಂಡವು ಪ್ರಥಮ ಸ್ಥಾನ ಪಡೆಯಿತು. ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ತಂಡ ದ್ವಿತೀಯ ಸ್ಥಾನ ಹಾಗೂ ದಾವಣಗೆರೆ ತಂಡವು ತೃತೀಯ ಸ್ಥಾನ ಪಡೆದವು.ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್, ಚಿಕ್ಕಬಳ್ಳಾಪುರ ಜಿಲ್ಲಾ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆದ ಬೆಂಗಳೂರು ಗ್ರಾಮೀಣ ವಿಭಾಗದ ಲೀಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯವು ಪಿನಾಕಿನಿ ಮತ್ತು ಚಿನ್ನದ ನಾಡು ನಡುವೆ ಏರ್ಪಟ್ಟಿತ್ತು. ಪಿನಾಕಿನಿ ಬ್ಯಾಸ್ಕೆಟ್ ಬಾಲ್ ತಂಡವು ೬೮ ಪಾಯಿಂಟ್‌ಗಳನ್ನು ಪಡೆದು ಪ್ರಥಮ ಸ್ಥಾನ ಪಡೆದರೆ ಪ್ರತಿಸ್ವರ್ಧಿಯಾಗಿದ್ದ ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ತಂಡವು ೫೯ ಪಾಯಿಂಟ್‌ಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆಯಿತು. ಪಿನಾಕಿನಿ ತಂಡದ ಪವನ್ ೨೫ ಪಾಯಿಂಟ್, ವೇಣುಗೋಪಾಲ್ ೨೧ ಪಾಯಿಂಟ್ ಪಡೆದು ತಂಡವನ್ನು ಗೆಲುವಿನ ಹಾದಿಯತ್ತ ಸಾಗಿಸಿ ಪ್ರಥಮ ಸ್ಥಾನ ಗಳಿಸುವಂತೆ ಮಾಡಿದರು. ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ತಂಡದ ಪರ ಯಶ್ವಂತ್ ೧೮ ಮತ್ತು ತರುಣ್ ೧೧ ಪಾಯಿಂಟ್ ಪಡೆದಿದ್ದರು.

ಬೆಂಗಳೂರು ಗ್ರಾಮೀಣ ವಿಭಾಗದ ಲೀಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ಬ್ಯಾಸ್ಕೆಟ್ ಬಾಲ್ ಕ್ಲಬ್, ಕೆ.ಜಿ.ಎಫ್ ಬ್ಯಾಸ್ಕೆಟ್ ಬಾಲ್ ಕ್ಲಬ್, ಶ್ರೀ ದೇವರಾಜ್ ಅರಸ್ ಬ್ಯಾಸ್ಕೆಟ್ ಬಾಲ್ ಕ್ಲಬ್, ಕೋಲಾರ ವೈ.ಎಸ್.ಬಿ.ಸಿ ಬ್ಯಾಸ್ಕೆಟ್ ಬಾಲ್ ಕ್ಲಬ್, ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್, ಪಿನಾಕಿನಿ ಬ್ಯಾಸ್ಕೆಟ್ ಬಾಲ್ ಕ್ಲಬ್, ಚಿಕ್ಕಬಳ್ಳಾಪುರ ಬ್ಯಾಸ್ಕೆಟ್ ಬಾಲ್ ಕ್ಲಬ್, ದಾವಣಗೆರೆ ಬ್ಯಾಸ್ಕೆಟ್ ಬಾಲ್ ಕ್ಲಬ್, ನ್ಯೂ ವೇ ಅಫ್ ಲೈಫ್ ಬ್ಯಾಸ್ಕೆಟ್ ಬಾಲ್ ಕ್ಲಬ್ ತಂಡಗಳು ಭಾಗವಹಿಸಿದ್ದವು.

ಕೋಲಾರ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ತಂಡವು ದ್ವಿತೀಯ ಸ್ಥಾನ ಪಡೆದು ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವುದಕ್ಕೆ ತಂಡದ ಗೌರವಾಧ್ಯಕ್ಷರು ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಅಭಿನಂದಿಸಿದ್ದಾರೆ.