ಸಾರಾಂಶ
ಕೊಳ್ಳೇಗಾಲ ಪಟ್ಟಣದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಶಂಕುಸ್ಥಾಪನೆಗೊಂಡು 6ವರ್ಷಗಳಾಗಿವೆ. ಉದ್ಘಾಟನೆಗೊಂಡು ಒಂದೂವರೆ ವರುಷವೇ ಸಂದಿದೆ. ಹಾಗಿದ್ದರೂ ಸಹ ಇನ್ನು ಹಲವು ಕಾಮಗಾರಿ ಅಪೂರ್ಣವಾಗಿ ಉಳಿದಿದೆ.
ಎನ್ ನಾಗೇಂದ್ರಸ್ವಾಮಿಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಶಂಕುಸ್ಥಾಪನೆಗೊಂಡು 6ವರ್ಷಗಳಾಗಿವೆ. ಉದ್ಘಾಟನೆಗೊಂಡು ಒಂದೂವರೆ ವರುಷವೇ ಸಂದಿದೆ. ಹಾಗಿದ್ದರೂ ಸಹಾ ಇನ್ನು ಹಲವು ಕಾಮಗಾರಿಗೆ ಗ್ರಹಣ ಹಿಡಿಯುವ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಪೂರ್ಣವಾಗಿಯೇ ಉಳಿದಿದೆ.ಹೌದು, ಕೊಳ್ಳೇಗಾಲ ಬಸ್ ನಿಲ್ದಾಣಕ್ಕೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್.ಜಯಣ್ಣ ಅವರು ಶಾಸಕರಾಗಿದ್ದ ವೇಳೆ 2018 ಅ.1ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 2023ರ ಮಾ.3ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸೋಮಣ್ಣ, ಮಾಜಿ ಸಚಿವ ಎನ್ ಮಹೇಶ್ ಅವರು ಶಾಸಕರಾಗಿದ್ದ ವೇಳೆ ಉದ್ಘಾಟನೆ ನೆರವೇರಿಸಿದ್ದರು. ಈ ವೇಳೆ ಹಲವು ನಗರಸಭಾ ಸದಸ್ಯರು ಪಕ್ಷಬೇಧ ಮರೆತು ಕಾಮಗಾರಿ ಅಪೂರ್ಣ ಹಿನ್ನೆಲೆಯಲ್ಲಿ ಯಾವುದೆ ಕಾರಣಕ್ಕೂ ಬಸ್ ನಿಲ್ದಾಣದ ಉದ್ಘಾಟನೆ ಬೇಡ ಎಂದು ವಿರೋಧಿಸಿ ಹಲವು ಗಂಟೆಗಳ ಕಾಲ ಪ್ರತಿಭಟನೆ ಸಹ ನಡೆಸಿದ್ದರು.ಮನವೊಲಿಸಲು ಮುಂದಾದ ವಿ.ಸೋಮಣ್ಣ ಅಂದು ಪ್ರತಿಭಟನಾಕಾರರನ್ನು ಅಪೂರ್ಣ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆದಾರರ ಜೊತೆ ಚರ್ಚಿಸೋಣ, ಆಗಬೇಕಾದ ಕಾಮಗಾರಿ ಆಗಿಯೇ ತೀರುತ್ತವೆ, ನೀತಿ ಸಂಹಿತೆ ಜಾರಿಯಾಗುವ ಕಾರಣಕ್ಕಾಗಿ ನೀವೆಲ್ಲರೂ ಉದ್ಘಾಟನೆಗೆ ಬನ್ನಿ, ಇದು ಸಾರ್ವಜನಿಕರ ಉಪಯೋಗಕ್ಕಾಗಿ ಎಂದು ಸಚಿವ ಸೋಮಣ್ಣ ಸ್ವತಃ ಪ್ರತಿಭಟನಾನಿರತರ ಸ್ಥಳಕ್ಕೆ ತೆರಳಿ ಆಹ್ವಾನ ನೀಡಿದರೂ ಸಹಾ ಬಹುತೇಕ ನಗರಸಭಾ ಸದಸ್ಯರು ಅಂದಿನ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ, ಬದಲಿಗೆ ಕಾಮಗಾರಿ ವಿರೋಧದ ನಡುವೆಯೇ ಉದ್ಘಾಟಿಸಲಾಗಿತ್ತು.ಆಗಬೇಕಾದ ಕಾಮಗಾರಿಗಳೇನು?: ಕೋಟ್ಯಂತರ ರು. ಬಸ್ ನಿಲ್ದಾಣದ ಕಾಮಗಾರಿ ಪೈಕಿ 2 ಕಡೆ ಸಂಚರಿಸುವ ಲಿಫ್ಟ್ ಕೆಲಸ ಆಗಬೇಕಿದೆ. ಈ ಮೂಲಕ ಲಿಫ್ಟ್ ಸಂಚಾರಕ್ಕೆ ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕಿದೆ. ಅದೇ ರೀತಿಯಲ್ಲಿ ಮೇಲಿನ ಟೆರಸ್ ಕಾಮಗಾರಿ ಸಹಾ ಉತ್ತಮ ರೀತಿಯಲ್ಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟೆರಸ್‌ಗೆ ತೆರಳದಂತೆ 2 ಭಾಗಗಳಲ್ಲೂ ಬಂದ್ ಮಾಡಿಸುವ ಮೂಲಕ ಬೀಗ ಹಾಕಲಾಗಿದೆ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇನ್ನೂ ವಿಕಲಚೇತನ ಶೌಚಾಲಯ ಕಾಮಗಾರಿಯೂ ಆಗಿಲ್ಲ, ಇತ್ತೀಚೆಗೆ ವಿಕಚಚೇತನರ ಶೌಚಾಲಯ ಎಂಬ ಫಲಕವಿದ್ದ ಬೋರ್ಡ್‌ಗೂ ಪೇಪರ್ ಮೂಲಕ ಮುದ್ರೆ ಹಾಕಲಾಗಿರುವುದು ನಾನಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಇನ್ನು ಕೆಳಹಂತದ ಪಾರ್ಕಿಂಗ್‌ಗೆ ಬಸ್ ನಿಲ್ದಾಣದ ಒಳಾಂಗಣದಿಂದ ಪ್ರವೇಶಿಸುತ್ತಿದ್ದಂತೆ ಆ ಭಾಗದ ಕೆಲ ಗೋಡೆಗಳಲ್ಲಿ ಬಿರುಕು ಸಹಾ ಕಂಡು ಬಂದಿದ್ದು ಹಲವು ಕಾಮಗಾರಿ ನಡೆಯಬೇಕಿದ್ದು ಸ್ಥಳೀಯ ಶಾಸಕರು, ನಗರಸಭೆ ಸದಸ್ಯರು, ಅಧ್ಯಕ್ಷರು, ಸ್ಥಳೀಯ ವಾರ್ಡ್ ಸದಸ್ಯರು ಖುದ್ದು ಬೇಟಿ ನೀಡುವ ಮೂಲಕ ಅಲ್ಲಿನ ಲೋಪ ಪರಿಶೀಲಿಸುವ ಅಗತ್ಯವಿದೆ.ಅಲ್ಲದೆ ಕಾಮಗಾರಿ ಪೂರ್ಣಗೊಳಿಸುವ ತನಕ ಗುತ್ತಿಗೆದಾರರ ಬಿಲ್ ನೀಡದಂತೆ ನಗರಸಭೆ ಪೌರಾಯುಕ್ತರು ಗಮನಹರಿಸಬೇಕು ಎಂದು ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.
ಕಾಮಗಾರಿ ಗುಣಮಟ್ಟ ಪರಿಶೀಲಿಸಿ: ಬಸ್ ನಿಲ್ದಾಣದ ಕಾಮಗಾರಿ ನಕ್ಷೆಯನ್ನು ಗುತ್ತಿಗೆದಾರರು 2 ಬಾರಿ ಬದಲಾಯಿಸಿದ್ದು ನಕ್ಷೆಯಂತೆ ಕಾಮಗಾರಿ ನಡೆಸಿಲ್ಲ ಎಂಬ ಆಕ್ಷೇಪವೂ ಸ್ಥಳೀಯ ನಾಗರಿಕರ ಆರೋಪವಾಗಿದ್ದು ಈ ಸಂಬಂಧ ಸ್ಥಳೀಯ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ನಗರಸಭೆ ಸದಸ್ಯರು, ಅಧ್ಯಕ್ಷರೊಡಗೂಡಿ ಜಂಟಿ ಪರಿಶೀಲಿಸಿದ ಬಳಿಕ ಮತ್ತು ಗುಣಮಟ್ಟ ಪರಿಶೀಲಿಸಿ ಉಳಿಕೆ ಬಿಲ್ ಪಾವತಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಮನವಿ ಮಾಡಿದ್ದಾರೆ. ಗುತ್ತಿಗೆದಾರರಿಗೆ ಕಾಮಗಾರಿಯ ₹3ಕೋಟಿ ಬಿಡುಗಡೆ ಆಗಬೇಕು, ಸಾರಿಗೆ ಇಲಾಖೆಯಿಂದಲೇ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಣ ಬಿಡುಗಡೆಯಾದ ಕೂಡಲೆ ಉಳಿದ ಕಾಮಗಾರಿ ಪೂರ್ಣಗೊಳ್ಳಲಿವೆ. ರಮೇಶ್, ನಗರಸಭೆ ಪೌರಾಯುಕ್ತ, ಕೊಳ್ಳೇಗಾಲ