ಸಾರಾಂಶ
ಉಡುಪಿ ಜಿಲ್ಲಾಡಳಿತಕ್ಕೆ 4 ವಾರದಲ್ಲಿ ನಿರ್ದೇಶನ ಪಾಲಿಸಲು, ಸಮಿತಿ ರಚಿಸಲು ಗಡವು
ಕನ್ನಡಪ್ರಭ ವಾರ್ತೆ ಕುಂದಾಪುರನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಲ್ಲೂರಿನಲ್ಲಿ ಪರಿಸರ ಮಾಲಿನ್ಯ ಮತ್ತು ಭೂ ಅತಿಕ್ರಮಣ ತಡೆಯುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಜಿಲ್ಲಾಡಳಿತಕ್ಕೆ ದಕ್ಷಿಣ ವಲಯದ ಹಸಿರು ಪೀಠವು ಮಧ್ಯಂತರ ಆದೇಶ, 4 ವಾರಗಳ ಗಡುವು, ನಿರ್ದೇಶನ ನೀಡಿದೆ.ಕೊಲ್ಲೂರು ದೇವಳದ ಪರಿಸರದಲ್ಲಿರುವ ವಸತಿಗೃಹ ಹಾಗೂ ವಾಣಿಜ್ಯ ಕಟ್ಟಡಗಳಿಂದ ಆಗುತ್ತಿರುವ ಜಲ ಹಾಗೂ ಪರಿಸರದ ಮಾಲಿನ್ಯ, ಜಲಚರಗಳ ನಾಶ, ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಮತ್ತು ಭೂಮಿ ಅತಿಕ್ರಮಣದ ವಿರುದ್ಧ ಇಲ್ಲಿನ ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು 2022ರಲ್ಲಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, 2024ರಲ್ಲಿ ಅರ್ಜಿ ವಿಚಾರಣೆಗೆ ಅಂಗೀಕಾರವಾಗಿದೆ. ಇದೀಗ ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹಸಿರು ಪೀಠದ ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಹಾಗೂ ಡಾ. ಸತ್ಯಗೋಪಾಲ್ ಕೊರ್ಲಪತಿ ಅವರು ಜು.9ರಂದು ಉಡುಪಿ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದು, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಇಲ್ಲಿನ ಸೌಪರ್ಣಿಕಾ ನದಿ ಮತ್ತು ಅಗ್ನಿತೀರ್ಥಗಳ ಮಾಲಿನ್ಯವನ್ನು ತಡೆಯುವುದಕ್ಕಾಗಿ ಕೊಳಚೆನೀರು ಶುದ್ಧೀಕರಣ ಘಟಕ (ಎಸ್‌ಟಿಪಿ)ಗಳನ್ನು ತಕ್ಷಣದ ಸ್ಥಾಪಿಸಬೇಕು. ಎಲ್ಲ ವಸತಿಗೃಹ, ವಾಣಿಜ್ಯ ಮತ್ತು ಖಾಸಗಿ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಬೇಕು, 4 ವಾರಗಳಲ್ಲಿ ಈ ನಿರ್ದೇಶನ ಹಾಗೂ ಸೂಚನೆಗಳನ್ನು ಪಾಲಿಸಬೇಕು. ಈ ನಿರ್ದೇಶನಗಳ ಪಾಲನೆಗೆ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.ಹಸಿರು ನ್ಯಾಯಪೀಠದ ಮಧ್ಯಂತರ ನಿರ್ದೇಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅರ್ಜಿದಾರ ಹರೀಶ್ ತೋಳಾರ್, ಮುಂದಿನ ವಿಚಾರಣೆಯಲ್ಲಿ ಇಲ್ಲಿನ ಪುಣ್ಯನದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪರಿಸರ ನಾಶ, ನದಿ ಮುಖಜ ಭೂಮಿಗಳ ಅಕ್ರಮ ಒತ್ತುವರಿ, ಸರ್ಕಾರಿ, ದೇವಸ್ಥಾನ ಹಾಗೂ ಸಾರ್ವಜನಿಕ ಭೂಮಿಗಳ ಅನಧಿಕೃತ ಅತಿಕ್ರಮಣ ಹಾಗೂ ಪರಭಾರೆ, ನಿಯಮ ಬಾಹಿರ ಕಟ್ಟಡ ನಿರ್ಮಾಣ ಹಾಗೂ ಭಕ್ತರ ಪವಿತ್ರ ಭಾವನೆಗಳಿಗೆ ನಿರಂತರವಾಗಿ ಆಗುತ್ತಿರುವ ಘಾಸಿಗಳು ಸೇರಿದಂತೆ ಕ್ಷೇತ್ರದ ಪಾವಿತ್ರ್ಯ ನಾಶ, ಅತಿಕ್ರಮಣ, ಪರಿಸರ ನಾಶ ಹಾಗೂ ಕಾನೂನು ಉಲ್ಲಂಘನೆಗಳ ಕುರಿತು ಘನ ನ್ಯಾಯಾಲಯಕ್ಕೆ ದಾಖಲೆಗಳ ಸಹಿತ ಮನವರಿಕೆ ಮಾಡುವುದಾಗಿ ತಿಳಿಸಿದ್ದಾರೆ.