ಕೊಣಾಜೆ: ವೀರರಾಣಿ ಅಬ್ಬಕ್ಕ ರಥಯಾತ್ರೆ

| Published : Sep 19 2025, 01:03 AM IST

ಸಾರಾಂಶ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಅಭಯರಾಣಿ- ವೀರನಾರಿ ಅಬ್ಬಕ್ಕಳ 500 ನೇ ಜಯಂತಿ ಪ್ರಯುಕ್ತ ರಾಣಿ ಅಬ್ಬಕ್ಕ ರಥಯಾತ್ರೆಗೆ ಕೊಣಾಜೆ ಮಂಗಳೂರು ವಿ.ವಿ.ಯ ಸಿ.ವಿ.ರಾಮನ್ ವೃತ್ತದಲ್ಲಿ ಸ್ವಾಗತ ಕೋರಲಾಯಿತು.

ಉಳ್ಳಾಲ: ಉಳ್ಳಾಲ ರಾಣಿ ಅಬ್ಬಕ್ಕ ತುಳುನಾಡಿನ ಶೌರ್ಯ ಸ್ವಾಭಿಮಾನದ ವೀರ ಮಹಿಳೆ. ಪೋರ್ಚುಗೀಸರನ್ನು ಎದುರಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಭಾರತದ ಹೆಮ್ಮೆಯ ಪುತ್ರಿ. ರಾಣಿ ಅಬ್ಬಕ್ಕನ ಕುರಿತು‌ ಯಾರು ಕಾರ್ಯಕ್ರಮ ಮಾಡಿದರೂ ನಮ್ಮ ಬೆಂಬಲವಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಪೀಠದ ಸಂಯೋಜಕ ಡಾ.ಧನಂಜಯ‌ ಕುಂಬ್ಳೆ ಹೇಳಿದ್ದಾರೆ.

ಅವರು ಮಂಗಳವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಅಭಯರಾಣಿ- ವೀರನಾರಿ ಅಬ್ಬಕ್ಕಳ 500 ನೇ ಜಯಂತಿ ಪ್ರಯುಕ್ತ ರಾಣಿ ಅಬ್ಬಕ್ಕ ರಥಯಾತ್ರೆಗೆ ಕೊಣಾಜೆ ಮಂಗಳೂರು ವಿ.ವಿ.ಯ ಸಿ.ವಿ.ರಾಮನ್ ವೃತ್ತದಲ್ಲಿ ಸ್ವಾಗತಿಸಿ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಗೋವಾದಲ್ಲಿ ಪೋರ್ಚುಗೀಸರ ಉಪಟಳಕ್ಕೆ ಅಲ್ಲಿನ ಭಾರತೀಯ ಬಂಧುಗಳು ಊರು ಬಿಟ್ಟು ಓಡಬೇಕಾಯಿತು. ಅದೇ ಸ್ಥಿತಿ ಕರಾವಳಿಯಲ್ಲಿ ನಡೆಯದ ಹಾಗೆ ರಕ್ಷಿಸಿದ್ದು ರಾಣಿ ಅಬ್ಬಕ್ಕ. ಆಕೆಯ ಸ್ವಾಭಿಮಾನ, ದೇಶಪ್ರೇಮ ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾಗಲಿ ಎಂದು ಅವರು ಹೇಳಿದರು.ರಥಯಾತ್ರೆಯ ಪ್ರಾಂತ ಅಧ್ಯಕ್ಷ ರವಿ ಮಂಡ್ಯ, ಮಂಗಳೂರು ವಿವಿ ಪ್ರಾಧ್ಯಾಪಕರಾದ ಪ್ರೊ.ಪರಮೇಶ್ವರ , ಡಾ.ಶಶಿರೇಖಾ,ಡಾ, ಚಂದ್ರು ಹೆಗ್ಡೆ, ಡಾ.ಪೌಲ್ ಜಿ ಅಕ್ವಿನಸ್ , ಡಾ.ತಾರಾವತಿ,‌ ಡಾ.ಪ್ರಶಾಂತ ನಾಯ್ಕ, ಡಾ.ತಿರುಮಲೇಶ್ ಭಟ್ ಮೊದಲಾದವರು ಇದ್ದರು.ರಥಯಾತ್ರೆಯ ಪ್ರಾಂತ ಸಂಯೋಜಕ ಕೇಶವ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.