ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಹೊನ್ನೇರು ಬೈಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಹಿಟಾಚಿ ಮೂಲಕ ಬಿದಿರು ನೆಡುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಗುರುವಾರ ನಡೆದಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಪೂರ್ವ ಮಾಹಿತಿ ನೀಡದೆ, ಹೊನ್ನೇರು ಬೈಲು ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ತಿಳಿಸಿ ಗುಂಡಿ ತೆಗೆದು ಬಿದಿರು ನೆಡುವ ಕಾರ್ಯ ಆರಂಭಿಸಿದ್ದರು. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕಾಮಗಾರಿ ತಡೆದು, ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಕೆಲಸ ಮುಂದುವರಿಸಬಾರದು ಎಂದು ಪಟ್ಟು ಹಿಡಿದರು.

ಬಳಿಕ ಸ್ಥಳಕ್ಕೆ ಡಿಎಫ್‌ಓ ಅಭಿಷೇಕ್, ಎಸಿಎಫ್ ನವೀನ್, ಸೋಮವಾರಪೇಟೆ ಆರ್‌ಎಫ್‌ಒ ಮಲ್ಲೇಶ್, ಡಿಆರ್‌ಎಫ್‌ಒ ಕಿರಣ್ ಹಾಗೂ ಸಿಬ್ಬಂದಿಗಳು ಆಗಮಿಸಿದ ವೇಳೆ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು.

ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್ ಮಾತನಾಡಿ, ಕೂತಿ ಗ್ರಾಮದಲ್ಲಿ ಸೆಕ್ಷನ್-೪ ಅಧಿಸೂಚನೆ ಇಲ್ಲ. ಇದ್ದಿದ್ದರೆ ಗ್ರಾಮಸ್ಥರಿಗೆ ನೋಟಿಸ್ ನೀಡಬೇಕಿತ್ತು. ಸಿ ಆ್ಯಂಡ್ ಡಿ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸರ್ಕಾರ ನೇಮಿಸಿರುವ ವಿಶೇಷ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುವವರೆಗೆ ರೈತರಿಗೆ ಯಾವುದೇ ತೊಂದರೆ ನೀಡಬಾರದು. ಈಗಾಗಲೇ ಗ್ರಾಮಸ್ಥರು ನಮೂನೆ ೫೦ ಮತ್ತು ೫೩ರಡಿ ಅರ್ಜಿ ಸಲ್ಲಿಸಿದ್ದಾರೆ. ಮೊದಲು ಜಂಟಿ ಸರ್ವೇ ನಡೆಸಿ ನಂತರವೇ ಮೀಸಲು ಅರಣ್ಯ ಎಲ್ಲಿದೆ ಎಂದು ತಿಳಿದುಕೊಂಡು ಬಿದಿರು ನೆಡುವ ಕೆಲಸ ಮಾಡಬೇಕು ಎಂದು ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಗ್ರಾಮ ಸಮಿತಿಗೆ ಮಾಹಿತಿ ನೀಡದೇ ಯಂತ್ರಗಳ ಮೂಲಕ ಕಾಮಗಾರಿ ಆರಂಭಿಸಿರುವುದು ಖಂಡಿಸಿದರು. ಗಿಡ ನೆಡುವುದಕ್ಕೆ ಆದೇಶದ ಪ್ರತಿಯನ್ನೂ ಅಧಿಕಾರಿಗಳು ನೀಡಿಲ್ಲ ಎಂದು ಆರೋಪಿಸಿದರು. ಕಾಡುಪ್ರಾಣಿಗಳ ಸಮಸ್ಯೆ ವೇಳೆ ಸ್ಪಂದಿಸದ ಅರಣ್ಯ ಇಲಾಖೆ ಈಗ ಏಕಾಏಕಿ ಖಾಲಿ ಜಾಗದಲ್ಲಿ ಬಿದಿರು ನೆಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದರು.


ಇದಕ್ಕೆ ಪ್ರತಿಕ್ರಿಯಿಸಿದ ಡಿಎಫ್ ಅಭಿಷೇಕ್, ಜಂಟಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿ, ಅಧಿಕಾರಿಗಳು ಸ್ಥಳದಿಂದ ತೆರಳಿದರು. ಗ್ರಾಮಸ್ಥರಾದ ಪ್ರಕಾಶ್, ಜಿತೇಂದ್ರ, ದಿನೇಶ್, ದರ್ಶನ್, ವಿಜಯ್, ಲೋಹಿತ್, ವಿನೋದ್ ಮತ್ತಿತರರು ಇದ್ದರು.