ಇಂದಿನಿಂದ ಕೂವಲೆರ ಕೌಟುಂಬಿಕ ವಾಲಿಬಾಲ್ ಕಪ್‌-2025

| Published : Jan 17 2025, 12:47 AM IST

ಇಂದಿನಿಂದ ಕೂವಲೆರ ಕೌಟುಂಬಿಕ ವಾಲಿಬಾಲ್ ಕಪ್‌-2025
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ‘ಕೂವಲೆರ ಚಿಟ್ಟಡೆ ಕಪ್ -2025’ ಶುಕ್ರವಾರ ಆರಂಭಗೊಳ್ಳಲಿದೆ. ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿರುವ ಚಿಟ್ಟಡೆಯ ಜುಮ್ಮಾ ಮಸೀದಿ ಮೈದಾನದಲ್ಲಿ ಮೂರು ದಿನ ಪಂದ್ಯಾವಳಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ‘ಕೂವಲೆರ ಚಿಟ್ಟಡೆ ಕಪ್ -2025’ ಶುಕ್ರವಾರ ಆರಂಭಗೊಳ್ಳಲಿದೆ. ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿರುವ ಚಿಟ್ಟಡೆಯ ಜುಮ್ಮಾ ಮಸೀದಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ಸಿದ್ಧತೆಗಳು ಅಂತಿಮಗೊಂಡಿವೆ.

ಕೊಡವ ಮುಸ್ಲಿಮರ ಪ್ರಾತಿನಿಧಿಕ ಸಂಘಟನೆ ‘ಕೊಡವ ಮುಸ್ಲಿಂ ಅಸೋಸಿಯೇಷನ್ ನ (ಕೆಎಂಎ) ಅನುಮೋದಿತ ಮನೆತನದವರಿಗೆ ಮಾತ್ರ ಈ ಕೌಟುಂಬಿಕ ಪಂದ್ಯಾವಳಿ ಸೀಮಿತ. ಇದರಂತೆ ಒಟ್ಟು 43 ಕುಟುಂಬ ತಂಡಗಳು ಈ ಪಂದ್ಯಾವಳಿಗಾಗಿ ನೋಂದಾಯಿಸಿಕೊಂಡಿವೆ. ಶುಕ್ರವಾರ ಆರಂಭಗೊಳ್ಳುವ ಈ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ಭಾನುವಾರ ಕೊನೆಗೊಳ್ಳಲಿದೆ.

ಪಂದ್ಯಾವಳಿಗಾಗಿ ಕಳೆದ ಎರಡು ತಿಂಗಳಿನಿಂದ ಅಗತ್ಯ ಸಿದ್ಧತೆ ಆರಂಭಿಸಲಾಗಿತ್ತು. ಇದೀಗ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದೆ. ಪ್ರೇಕ್ಷಕರ ಅನುಕೂಲಕ್ಕಾಗಿ ಮೈದಾನದ ಸುತ್ತಲೂ ಎರಡು ಬೃಹತ್ ಗ್ಯಾಲರಿ ನಿರ್ಮಿಸಲಾಗಿದೆ. ಪಂದ್ಯಾವಳಿ ಆಯೋಜಿಸಿರುವ ಕುಟುಂಬದ ವತಿಯಿಂದ ವಿಜೇತರಿಗೆ ಒಟ್ಟು ನಾಲ್ಕು ಸ್ಥಾನದ ಬಹುಮಾನಗಳನ್ನು ನೀಡಲಾಗುವುದು. ಚಾಂಪಿಯನ್ ತಂಡಕ್ಕೆ ರು. 55555, ರನ್ನರ್ಸ್ ತಂಡಕ್ಕೆ ರು. 33333, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರು. 22222 ಹಾಗೂ 4ನೇ ಸ್ಥಾನ ಪಡೆಯುವ ತಂಡಕ್ಕೆ ರು. 11111 ನಗದು ಬಹುಮಾನ ಸೇರಿದಂತೆ ತಲಾ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುವುದು.

ಜೊತೆಗೆ ಚಾಂಪಿಯನ್ ತಂಡಕ್ಕೆ ಕೆಎಂಎ ವಿನ್ನರ್ಸ್ ರೋಲಿಂಗ್ ಟ್ರೋಫಿ ಪ್ರದಾನ ಮಾಡಲಾಗುವುದು ಎಂದು ಆಯೋಜನ ಸಮಿತಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೂವಲೆರ ಪೈಝ ಸಜೀರ್ ಮಾಹಿತಿ ನೀಡಿದ್ದಾರೆ.

ಪಂದ್ಯದ ವೇಳೆ ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಲು ಕೇರಳದಿಂದ ನುರಿತ ವಾಲಿಬಾಲ್ ತೀರ್ಪುಗಾರರನ್ನು ಕರೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಮಧ್ಯಾಹ್ನದ ನಂತರ ನಡೆಯುವ ಸಮಾರಂಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಪಂದ್ಯಾವಳಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಚಿಟ್ಟಡೆ ಕೂವಲೆರ ಕುಟುಂಬದ ಅಧ್ಯಕ್ಷ ಉಮರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹೊದ್ದೂರು ಗ್ರಾ. ಪಂ. ಅಧ್ಯಕ್ಷ ಎಚ್.ಎ. ಹಂಸ, ಎನ್. ಸಿ. ಟಿ. ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಅಕ್ಕಳತಂಡ ಎಸ್. ಮೊಯ್ದು, ಗ್ರಾಮದ ತಕ್ಕರು ಮತ್ತು ಕೂವಲೆರ ಕುಟುಂಬದ ಹಿರಿಯರಾದ ಶಾದುಲಿ, ಗ್ರಾ. ಪಂ. ಸದಸ್ಯರಾದ ಸಣ್ಣು ಚಂಗಪ್ಪ, ಗೋಣಿಕೊಪ್ಪ ಎಪಿಎಂಸಿ ಯ ಮಾಜಿ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಚಿಟ್ಟಡೆ ಜಮಾಅತ್ ಅಧ್ಯಕ್ಷ ಕೂವಲೆರ ಫಕ್ರುದ್ದೀನ್, ಗ್ರಾಮದ ಹಿರಿಯರಾದ ಸಿ. ಯು. ಮೊಹಮ್ಮದ್, ಕೀಪಡ ಮುಹಮ್ಮದ್, ಎ. ಎ. ಇಬ್ರಾಹಿಂ, ಗ್ರಾ. ಪಂ. ಮಾಜಿ ಸದಸ್ಯ ವೈ. ಇ. ಮುಸ್ತಫಾ, ಕಾಫಿ ಬೆಳೆಗಾರ ವೈ. ಎ. ಉಮ್ಮರ್, ಮಾಳೇಟಿರ ಚಂಗಪ್ಪ, ಸಿ. ಎಸ್. ಉಮ್ಮರ್, ಕೆ. ಎಂ. ಹಸೈನಾರ್ ಮೊದಲಾದವರು ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ಉದ್ಘಾಟನೆ ಅಂಗವಾಗಿ ಮೊದಲಿಗೆ ರಜಿತ್ ಫ್ರೆಂಡ್ಸ್ ಮತ್ತು ಲಿಮ್ರಾ ಫ್ರೆಂಡ್ಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ ಎಂದು ಕೂವಲೆರ ಪೈಝ ಸಜೀರ್ ತಿಳಿಸಿದ್ದಾರೆ.